ರಿಯಾಯಿತಿಯಲ್ಲಿ ಆಹಾರ ವಿತರಣೆ

FB_IMG_1749982652230
Published on

ಮುಳಬಾಗಿಲು: ನಿತ್ಯ 500 ಮಂದಿಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಇಂದಿರಾ ಕ್ಯಾಂಟೀನ್​ನಲ್ಲಿ ರಿಯಾಯಿತಿ ದರದಲ್ಲಿ ಸಿಗಲಿದ್ದು, ತಾಲೂಕು ಕಚೇರಿ ಸೇರಿ ಸರ್ಕಾರಿ ಕಚೇರಿಗೆ ಆಗಮಿಸುವ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ತಿಳಿಸಿದರು.

ನಗರದ ಆಂಜನೇಯಸ್ವಾಮಿ ದೇವಾಲಯ ರಸ್ತೆಯಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್​ಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, 5 ರೂ.ಗೆ ಬೆಳಗಿನ ಉಪಹಾರ, 10 ರೂ.ಗೆ ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ, ಒಟ್ಟಾರೆ ದಿನಕ್ಕೆ 25 ರೂ.ಗೆ ಮೂರೊಪ್ಪತ್ತಿನ ಆಹಾರ ದೊರೆಯಲಿದೆ ಎಂದರು.

ಮುಳಬಾಗಿಲು ಇಂದಿರಾ ಕ್ಯಾಂಟೀನ್​ ಉದ್ಘಾಟನೆಗೆ ಹಿಡಿದಿದ್ದ ಗ್ರಹಣ ಇಂದು ಬಿಡುಗಡೆಯಾಗಿದೆ. 5 ಬಾರಿ ಉದ್ಘಾಟನೆ ಕಾರ್ಯಕ್ರಮ ಮುಂದೂಡಲಾಗಿದ್ದು, ಹುಟ್ಟು ಹಬ್ಬದ ದಿನವೇ ಉದ್ಘಾಟನೆಯಾಗುತ್ತಿರುವುದು, ಇಂದಿನಿಂದಲೇ ಕ್ಷೇತ್ರದ ಜನರಿಗೆ ರಿಯಾಯಿತಿ ಊಟ ಸಿಗುತ್ತಿರುವುದು ಒಂದು ದೈವೆಚ್ಛೆಯಾಗಿದೆ ಎಂದರು.

ನಗರಾಭಿವೃದ್ಧಿ ಕೋಶದ ಜಿಲ್ಲಾ ನಿರ್ದೇಶಕಿ ಎಸ್​.ಅಂಬಿಕಾ ಮಾತನಾಡಿ, ಮುಳಬಾಗಿಲು ಇಂದಿರಾ ಕ್ಯಾಂಟೀನ್​ ಕಟ್ಟಡ ನಿಮಾರ್ಣಕ್ಕೆ <87 ಲಕ್ಷ, ಅಡುಗೆ ಸಲಕರಣೆಗಳಿಗೆ <46 ಲಕ್ಷ, ನಗರಸಭೆಯಿಂದ ತಡೆಗೋಡೆ ನಿಮಾರ್ಣ ಮತ್ತು ನೀರಿನ ವ್ಯವಸ್ಥೆಗೆ 12 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಕ್ಯಾಂಟೀನ್​ ನಿಮಾರ್ಣಕ್ಕೆ ಸರ್ಕಾರ 1.45 ಕೋಟಿ ರೂ. ವೆಚ್ಚ ಮಾಡಿದೆ. ಆಹಾರವನ್ನು ತಯಾರು ಮಾಡುವವರಿಗೆ ನಿಬಂಧನೆಗಳನ್ನು ನೀಡಲಾಗಿದೆ. ಗುತ್ತಿಗೆದಾರರು ಕ್ಯಾಂಟೀನ್​ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಬೇಕು ಎಂದು ಎಚ್ಚರಿಸಿದರು.

ಮುಳಬಾಗಿಲು ನಗರಸಭೆ ಅಧ್ಯಕ್ಷೆ ಶಭಾನ ಬೇಗಂ, ಉಪಾಧ್ಯಕ್ಷೆ ಸರಳಾನವೀನ್​, ವಾರ್ಡ್​ನ ಸದಸ್ಯೆ ಚೈತ್ರ ಸೇರಿ ಹಲವು ಸದಸ್ಯೆಯರು ಗೈರಾಗಿ ಗಂಡಂದಿರು ಮಾತ್ರ ಆಗಮಿಸಿದ್ದು ಚರ್ಚೆಗೆ ಗ್ರಾಸವಾಯಿತು.

ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅಮಾನುಲ್ಲಾ, ಪೌರಾಯುಕ್ತ ವಿ.ಶ್ರೀಧರ್​, ಎಇಇ ಎಂ.ವಿ.ವೆಂಕಟಾಚಲಪತಿ, ರೋಟರಿ ಮುಳಬಾಗಿಲು ಸೆಂಟ್ರಲ್​ ಅಧ್ಯಕ್ಷ ನಗವಾರ ಎನ್​.ಆರ್​.ಸತ್ಯಣ್ಣ, ನಗರಸಭೆ ಸದಸ್ಯರಾದ ಡಿ.ಸೋಮಣ್ಣ, ಎಂ.ಜೆ.ಮಲ್ಲಿಕಾರ್ಜುನ್​, ಮುಸ್ತಫಾ ಪಾಷಾ, ಶಾಹಿನ್​, ಬಿಜೆಪಿ ಮುಖಂಡ ಸಂದೀಪ್​, ಜೆಡಿಎಸ್​ ಮುಖಂಡರಾದ ಗೊಲ್ಲಹಳ್ಳಿ ಪ್ರಭಾಕರ್​, ಕವತನಹಳ್ಳಿ ಮುನಿಸ್ವಾಮಿ ಗೌಡ, ಪಿ.ರಾಮಚಂದ್ರಯ್ಯ, ಮಂಡಿಕಲ್ಲು ರಾಜಣ್ಣ, ಗ್ಯಾಸ್​ ರಘು, ನಾಗೇಶ್​, ಸುಬ್ರಮಣಿ, ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ರಾಮಮೂರ್ತಿ ನಾಯ್ಡು ಇದ್ದರು.

ಅನುದಾನದಲ್ಲಿ ತಾರತಮ್ಯ

ತಾಯಿ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯ 224 ಸದಸ್ಯರನ್ನು ಸಮಾನವಾಗಿ ಕಾಣಬೇಕು. ಆದರೆ 140 ಶಾಸಕರಿಗೆ ಮಾತ್ರ ಹೆಚ್ಚಿನ ಅನುದಾನ ನೀಡಿ ಉಳಿದ 84 ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಎಸಗುತ್ತಿದ್ದಾರೆ. ಇದರಿಂದ ಈ ಕ್ಷೇತ್ರಗಳು ಅಭಿವೃದ್ಧಿಯಲ್ಲಿ ಕುಂಠಿತಗೊಳ್ಳುತ್ತವೆ. ಈ ತಾಲೂಕುಗಳ ಜನರಿಗೆ ಮುಖ್ಯಮಂತ್ರಿ ನೀವೇ ಅಲ್ಲವೇ?, ರಾಜ್ಯ ಸರ್ಕಾರವು ಹೌದಲ್ಲವೇ?, ಜಿಲ್ಲೆಯ ಮೀಸಲು ಕ್ಷೇತ್ರದ ಕೆಜಿಎಫ್​ಗೆ, ಬಂಗಾರಪೇಟೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿರುವ ಸಿಎಂ ಮತ್ತೊಂದು ಮೀಸಲು ಕ್ಷೇತ್ರವಾದ ಮುಳಬಾಗಿಲನ್ನು ಬೇಕು ಎಂದೇ ರ್ನಿಲಕ್ಷ$್ಯ ಮಾಡಿರುವುದನ್ನು ದೇವರು ಕ್ಷಮಿಸುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹಲವು ಪ್ರಸ್ತಾವನೆಗಳು ಸಲ್ಲಿಸಿದ್ದರೂ ಸ್ಪಂದನೆ ನೀಡಿಲ್ಲ. ಆದರೂ ಇರುವ ಅಲ್ಪಸ್ವಲ್ಪ ಅನುದಾನದಲ್ಲೇ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಸಮೃದ್ಧಿ ಮಂಜುನಾಥ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net