

ಕಾರವಾರ: ಆಹಾರ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಹಾಗೂ ಶಿರಸ್ತೆದಾರ್ ದೀಪಕ್ ಅವರು ಶುಕ್ರವಾರ ಕದ್ರಾ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಸುಳಗೇರಿ ಗ್ರಾಮಸ್ಥರಿಗೆ ಕದ್ರಾ ನ್ಯಾಯಬೆಲೆ ಅಂಗಡಿಯಲ್ಲಿ ಎರಡು ತಿಂಗಳಿಂದ 5 ಕೆಜಿ ಅಕ್ಕಿಯನ್ನು ಮಾತ್ರ ನೀಡಿ ವಂಚನೆ ಮಾಡುತ್ತಿರುವ ಬಗ್ಗೆ ವಿಜಯವಾಣಿ `ತಲುಪದ ಸರ್ಕಾರದ ಗ್ಯಾರಂಟಿ' ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಕಿ ಅಕ್ಕಿಯನ್ನು ಗ್ರಾಮಸ್ಥರಿಗೆ ವಿತರಿಸಲು ಆದೇಶ ಮಾಡಿದ್ದಾರೆ.
ಪಡಿತರ ಪಡೆಯಲು ಬಯೋ ಮೆಟ್ರಿಕ್ ಕಡ್ಡಾಯ ಮಾಡಿದಾಗಿನಿಂದ ಸಮಸ್ಯೆ ಉದ್ಭವಿಸಿದೆ. ಇದರಿಂದ ಜುಲೈ ತಿಂಗಳಲ್ಲಿ ಬಯೋ ಮೆಟ್ರಿಕ್ ಇಲ್ಲದೇ ಮ್ಯಾನ್ಯುವಲ್ ಸ್ವರೂಪದಲ್ಲಿ ಅಕ್ಕಿ ವಿತರಣೆಗೆ ಪತ್ರ ಬರೆಯಲಾಗುತ್ತಿದೆ. ಇಲಾಖೆ ಆಯುಕ್ತರ ಅನುಮತಿ ಪಡೆದು ಕ್ರಮ ವಹಿಸಲಾಗುವುದು. ಈ ಬಾರಿ ಗುಡ್ಡ ಕುಸಿತ ಆಗಿದ್ದರಿಂದ ಊರಿಗೆ ಪಡಿತರ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಅವರು `ವಿಜಯವಾಣಿ'ಗೆ ತಿಳಿಸಿದ್ದಾರೆ. ನಂತರ ಸುಳಗೇರಿ ಎಲ್ಲ ರೇಶನ್ ಕಾರ್ಡ್ಗಳನ್ನು ಅಣಶಿಗೆ ವರ್ಗಾಯಿಸಿ, ಅಲ್ಲಿಂದ ಪಡಿತರ ವಿತರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ವಿವರಿಸಿದ್ದಾರೆ.