ಪಡಿತರದಾರರಿಗೆ 9.84 ಕೋಟಿ ರೂ.ನಗದು ಜಮೆ

food DD pressmeet
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ 2,31,009 ಪಡಿತರ ಚೀಟಿಗಳಿದ್ದು, ಆ ಪೈಕಿ ಆಧಾರ್ ನಂಬರ್‌ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ 1,70,287 ಪಡಿತರ ಚೀಟಿದಾರರಿಗೆ 9,84,50,910 ಕೋಟಿ ರೂ.ನಗದನ್ನು ಡಿಬಿಟಿ ಮುಖಾಂತರ ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕಿ ಜಿ.ಗಿರಿಜಾ ದೇವಿ ತಿಳಿಸಿದರು.
ದೇವನಹಳ್ಳಿಯ ಜಿಲ್ಲಾಡಳಿತಭವನ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಆದೇಶದಂತೆ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ವಿತರಿಸಲು ಉದ್ದೇಶಿಸಲಾಗಿದ್ದು, ಉಳಿದ 5 ಕೆ.ಜಿ. ಅಕ್ಕಿಯ ಬದಲಾಗಿ ಪಡಿತರ ಚೀಟಿ ಕುಟುಂಬದಲ್ಲಿನ ಪ್ರತಿ ಫಲಾನುಭವಿಗೆ ಪ್ರತಿ ಕೆಜಿಗೆ ರೂ.34 ರಂತೆ ಪ್ರತಿ ಸದಸ್ಯರಿಗೆ 170 ರೂ.ನಗದು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ 3 ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬ ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ. ಆಹಾರಧಾನ್ಯ ಪಡೆಯುತ್ತಿರುವುದರಿಂದ ಅಂತಹ ಕುಟಂಬಕ್ಕೆ ನಗದು ಸೌಲಭ್ಯ ನೀಡಲಾಗುವುದಿಲ್ಲ. ಆದರೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯ ಕುಟಂಬದಲ್ಲಿ 4 ಸದಸ್ಯರಿದ್ದರೆ ಈ ಕುಟುಂಬ 170 ರೂಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬ 510 ರೂಗಳನ್ನು, 6 ಸದಸ್ಯರನ್ನು ಹೊಂದಿರುವ ಕುಟುಂಬ 850 ರೂ. ಹಾಗೂ ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತದಲ್ಲಿ ಹಣ ಜಮೆ ಮಾಡಲಾಗುವುದು ಎಂದರು.
ಜು.20ರೊಳಗೆ ಸರಿಪಡಿಸಿಕೊಳ್ಳಿ: ಒಂದು ವೇಳೆ ಪಡಿತರ ಚೀಟಿದಾರರಿಗೆ ಹಣ ಜಮೆ ಆಗದಿದ್ದಲ್ಲಿ ಆಧಾರ್ ಸಂಖ್ಯೆಗೆ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಲಿಂಕ್ ಮಾಡದೆ ಇರುವುದು, ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದಾಗ ಅಥವಾ ಮುಖ್ಯಸ್ಥರೇ ಇಲ್ಲದಿದ್ದ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದಲ್ಲಿ, ಬ್ಯಾಂಕಿನಲ್ಲಿ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸದಿದ್ದಲ್ಲಿ ಹಾಗೂ ಮೂರು ತಿಂಗಳಲ್ಲಿ ಒಂದು ತಿಂಗಳಾದರೂ ಪಡಿತರ ಪಡೆಯದಿರುವವರಿಗೆ ನಗದು ಜಮೆ ಆಗದಿರುವ ಸಾಧ್ಯತೆಗಳಿರುತ್ತವೆ.ಈ ನ್ಯೂನತೆಗಳನ್ನು ಜು. 20ರೊಗಳಗೆ ಸರಿಪಡಿಸಿಕೊಂಡಲ್ಲಿ ಆಗಸ್ಟ್ ತಿಂಗಳಿಗೆ ಸಂಬಂಧಿಸಿದಂತೆ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕ್ರಮ ವಹಿಸಲಾಗುವುದು ಎಂದು ಜಿ.ಗಿರಿಜಾ ದೇವಿ ತಿಳಿಸಿದರು.
ಅಂಗಡಿಗಳಲ್ಲಿ ಪ್ರಚಾರ: ಕುಟುಂಬದ ಮುಖ್ಯಸ್ಥರನ್ನು ಗುರುತಿಸಿರುವ, ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತ ಪಡಿತರ ಚೀಟಿಯ ಕುಟುಂಬದವರು ನಗದು ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಜಿಲ್ಲೆಯಲ್ಲಿ 34,456 ಪಡಿತರ ಚೀಟಿಗಳಲ್ಲಿ ಕೆಲವು ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರುವುದಿಲ್ಲ. ಕೆಲವರು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರುವುದಿಲ್ಲ. ಇನ್ನೂ ಕೆಲವರು ಬ್ಯಾಂಕ್ ಖಾತೆ ತೆರೆದಿರುವುದಿಲ್ಲ. ಈ ಮಾಹಿತಿಯನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚಾರ ಪಡಿಸಲಾಗಿದೆ ಎಂದು ಜಿ.ಗಿರಿಜಾ ದೇವಿ ವಿವರಿಸಿದರು.
ಡಿಬಿಟಿಯಿಂದ ಜು.ತಿಂಗಳಲ್ಲಿ ವಂಚಿತರಾಗಿರುವ ಪಡಿತರ ಚೀಟಿದಾರರು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದ ನಂತರ ನಿಷ್ಕ್ರಿಯ ಬ್ಯಾಂಕ್ ಖಾತೆ ಪುನರಾರಂಭಗೊಳಿಸಿದ ನಂತರ ಹಾಗೂ ಇದುವರೆಗೂ ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆದರೆ ಮುಂದಿನ ತಿಂಗಳಿಂಧ ಡಿಬಿಟಿಗೆ ಅರ್ಹರಾಗಿರುತ್ತಾರೆ. ನ್ಯಾಯಬೆಲೆ ಅಂಗಡಿಯವರ ಸಭೆ ಕರೆದು ಸರ್ಕಾರದ ಈ ಕಾರ್ಯಕ್ರಮದ ಬಗ್ಗೆ ತಿಳಿವಳಿಕೆ ನೀಡಿ ಕಾರ್ಡ್‌ದಾರರಿಗೆ ಸಹಕರಿಸಲು ಹಾಗೂ ಯಶಸ್ವಿಗೊಳಿಸಲು ತಿಳಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net