

ಮಂಡ್ಯ: ಸಕ್ಕರೆಯನಾಡು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಮಂಡ್ಯ ಸೊಗಡಿನ ರುಚಿಯಾದ ರಾಗಿಮುದ್ದೆ, ಉಪ್ಸಾರು ಊಟವನ್ನು ಉಣಬಡಿಸಲು ಆಹಾರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಹಾರ ಸಮಿತಿ ಅಧ್ಯಕ್ಷರೂ ಆದ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಸಭೆಯಲ್ಲಿ ಊಟೋಪಚಾರದ ಬಗ್ಗೆ ಚರ್ಚೆ ನಡೆಸಲಾಯಿತು. ಅದರಂತೆ ರಾಗಿಮುದ್ದೆ, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಬೆಲ್ಲದ ಮಿಠಾಯಿ, ಬೆಲ್ಲದ ಮೈಸೂರುಪಾಕ್, ಕಜ್ಜಾಯ, ರವೆ ಹುಂಡೆ, ಚಪಾತಿ, ಶೇಂಗಾ ಚಟ್ನಿ, ಒಬ್ಬಟ್ಟು, ಪೊಂಗಲ್, ಪುಳಿಯೋಗರೆ, ಜೋಳದ ರೊಟ್ಟಿ, ಹುರುಳಿಕಾಳು ಬಸ್ಸಾರು, ಮೊಳಕೆ ಕಾಳು ಸಾರು, ಮೊಸಪ್ಪಿನ ಸಾರು, ಉಪ್ಸಾರು ಮುಂತಾದ ವಿವಿಧ ರೀತಿಯ ತಿನಿಸುಗಳನ್ನು ಉಣಬಡಿಸುವ ಸಲಹೆ ಕೇಳಿಬಂದಿತು. ಮುಖ್ಯವಾಗಿ ನೋಂದಣಿ ಮಾಡಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ವಿಶೇಷವಾಗಿ ಬಾಳೆ ಎಲೆ ಊಟದ ವ್ಯವಸ್ಥೆ ಮಾಡಬಹುದೇ ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲು ಅಭಿಪ್ರಾಯ ವ್ಯಕ್ತವಾಯಿತು.
ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಿಗೂ ಯಾವುದೇ ತೊಂದರೆ ನೂಕು ನುಗ್ಗಲು ಉಂಟಾಗದಂತೆ 3 ದಿನಗಳ ಕಾಲ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ದೊರಕಬೇಕು. ಆಹಾರ ಬಿಸಿಯಾಗಿ ಸವಿಯುವ ಪ್ರತಿಯೊಬ್ಬರು ಮಂಡ್ಯ ಜಿಲ್ಲೆಯನ್ನು ಸದಾ ನೆನಪಿನಲ್ಲಿ ಇಡುವ ರೀತಿ ಇರಬೇಕು. ಸಮ್ಮೇಳನ ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ಅತಿಥಿಗಳಾಗಿ ಬಹಳ ಆತ್ಮೀಯತೆಯಿಂದ ಸ್ವಾಗತಿಸಿ ಅತಿಥಿ ಸತ್ಕಾರ ಮಾಡಲು ಎಲ್ಲರೂ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಬೇಕು. ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಿರುತ್ತದೆ. ತಂಪಾಗಿ ಮೂರು ದಿನಗಳ ಕಾಲ ಒಂದೊಂದು ಪಾನಕ ನೀಡಿ. ನಿಂಬೆಹಣ್ಣಿನ ಪಾನಕ, ಕಬ್ಬಿನ ಹಾಲು, ಹಿರಳಿಕಾಯಿ ಜ್ಯೂಸ್, ಖರಬೂಜದ ಪಾನಕ ಸೇರಿದಂತೆ ಸೂಕ್ತವಾದ ಪಾನಕ ನೀಡಲು ವ್ಯವಸ್ಥೆ ಮಾಡಿ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಭಾಗದ ಜನರು ಹೆಚ್ಚು ಭಾಗವಹಿಸಲಿದ್ದಾರೆ. ಆದ್ದರಿಂದ ಉತ್ತರ ಕರ್ನಾಟಕ ಆಹಾರ ಖಾದ್ಯವನ್ನು ಸಹ ನೀಡುವುದು ಉತ್ತಮ ಎಂದರು. ಆಹಾರ ಸಮಿತಿ ಸದಸ್ಯ ಚಂದ್ರಶೇಖರ್ ಮಾತನಾಡಿ. ಮಂಡ್ಯ ಜಿಲ್ಲೆಯ ಜನರು ಊಟ ಬಡಿಸುವುದರಲ್ಲಿ ಎತ್ತಿದ ಕೈ. ಬರುವ ಜನರಿಗೆ ವಿವಿಧ ರೀತಿಯ ಊಟವನ್ನು ಬಡಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಸದಸ್ಯ ಕಾರ್ಯದರ್ಶಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹರ್ಷ ವಿ.ಪಣ್ಣೆದೊಡ್ಡಿ ಸೇರಿದಂತೆ ಸಮಿತಿ ಸದಸ್ಯರಿದ್ದರು.