

ಕನಕಗಿರಿ: ಪಟ್ಟಣದ ತಹಸಿಲ್ ಕಚೇರಿಯ ಆಹಾರ ಶಾಖೆಗೆ ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಆ.19ರಂದು ಆದೇಶ ಹೊರಡಿಸಿದ್ದಾರೆ.
ಕನಕಗಿರಿ 6 ವರ್ಷದ ಹಿಂದೆ ತಾಲೂಕು ಕೇಂದ್ರವಾಗಿದ್ದರೂ ನಾನಾ ಯೋಜನೆಗಳ ಸೌಲಭ್ಯ ಪಡೆಯಲು ಅವಶ್ಯವಾದ ಪಡಿತರ ಚೀಟಿ ತಿದ್ದುಪಡಿಗಾಗಿ ಗಂಗಾವತಿಗೆ ತೆರಳಬೇಕಿದ್ದು, ಸಾರ್ವಜನಿಕರಿಗೆ ಹೊರೆಯಾಗುತ್ತಿತ್ತು. ಅಲ್ಲದೇ, ಕನಕಗಿರಿಗೆ ನಿಯೋಜನೆಗೊಂಡ ಅಧಿಕಾರಿ ತಿಂಗಳಿನಿಂದ ಹಾಜರಾಗದಿರುವುದು ಸಮಸ್ಯೆಗೆ ಕಾರಣವಾಗಿತ್ತು.
ಈ ನಿಟ್ಟಿನಲ್ಲಿ ಇಲ್ಲಿನ ತಹಸಿಲ್ ಕಚೇರಿಯಲ್ಲಿ ಆಹಾರ ಶಾಖೆ ತೆರೆದು ಲಾಗಿನ್ ಸಹಿತ ಸಿಬ್ಬಂದಿ ಹಾಗೂ ಮೂಲಸೌಲಭ್ಯ ಕಲ್ಪಿಸುವಂತೆ ತಾಲೂಕು ಆಡಳಿತದಿಂದ ಜಿಲ್ಲಾಧಿಕಾರಿಗೆ ಆ.13ರಂದು ಪತ್ರ ಬರೆಯಲಾಗಿತ್ತು.
ಇದರಿಂದ ಕಾರಟಗಿ ಆಹಾರ ನಿರೀಕ್ಷಕ ನವೀನ್ ಮಠದ್ ಅವರನ್ನು ಹೆಚ್ಚುವರಿಯಾಗಿ ಕನಕಗಿರಿ ಆಹಾರ ನಿರೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಆ.20ರಂದು ಆಹಾರ ನಿರೀಕ್ಷಕರ ಲಾಗಿನ್‌ಗೆ ಪ್ರಸ್ತಾವನೆ ಶೀರ್ಷಿಕೆಯಡಿ ‘ವಿಜಯವಾಣಿ’ ವರದಿ ಪ್ರಕಟಗೊಂಡಿತ್ತು.
ಪತ್ರದಲ್ಲಿಲ್ಲ ಲಾಗಿನ್, ಮೂಲಸೌಲಭ್ಯದ ವಿಚಾರ: ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾರಟಗಿಯ ಆಹಾರ ನಿರೀಕ್ಷಕರನ್ನು ತಾತ್ಕಾಲಿಕವಾಗಿ ಅಧಿಕಾರಿಗಳು ನೇಮಿಸಿದ್ದಾರೆ. ಆದರೆ, ಕನಕಗಿರಿ ತಾಲೂಕು ಆಡಳಿತದ ಪ್ರಸ್ತಾವನೆಯಲ್ಲಿರುವಂತೆ ಲಾಗಿನ್, ಸಿಬ್ಬಂದಿ ಹಾಗೂ ಮೂಲಸೌಲಭ್ಯದ ಕುರಿತು ಮಾಹಿತಿಯನ್ನೇ ಪತ್ರದಲ್ಲಿ ಉಲ್ಲೇಖಿಸಿಲ್ಲ.
ಇದರಿಂದ ಕನಕಗಿರಿಯಲ್ಲಿ ಆಹಾರ ಶಾಖೆ ಆರಂಭವಾಗುತ್ತದೆಯೋ ಇಲ್ಲವೋ ಎನ್ನುವ ಗೊಂದಲ ಒಂದೆಡೆಯಾದರೆ, ಸೌಕರ್ಯವಿಲ್ಲದಿದ್ದರೆ ನಿಯೋಜನೆಗೊಂಡ ಅಧಿಕಾರಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಹೇಗೆ ಕಾರ್ಯನಿರ್ವಹಿಸಲು ಸಾಧ್ಯ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ.
ಕನಕಗಿರಿ ಆಹಾರ ಶಾಖೆಗೆ ನಿಯೋಜನೆಗೊಂಡಿರುವ ಆಹಾರ ನಿರೀಕ್ಷಕರು ವಾರದ 3 ದಿನಗಳಲ್ಲಿ ಕನಕಗಿರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅವರಿಗೆ ಈಗಾಗಲೇ ಕಾರಟಗಿ ತಾಲೂಕಿನ ಲಾಗಿನ್ ಇರುವುದರಿಂದ ಕನಕಗಿರಿಯಲ್ಲೂ ಅದನ್ನೇ ಬಳಸಿಕೊಂಡು ಕಾರ್ಯನಿರ್ವಹಿಸಬಹುದು.| ಪ್ರಾಣೇಶ ಎಸ್., ಪ್ರಭಾರಿ ಆಹಾರ ನಾಗರಿಕ ಸರಬರಾಜು ಇಲಾಖೆ, ಕೊಪ್ಪಳ