

ಮಂಗಳೂರು: ಕೋವಿಡ್ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರೊನಾ ವಾರಿಯರ್ಸ್‌ಗಳಾಗಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆಗೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ವಿಭಾಗಗಳಲ್ಲಿರುವ ಸಿಬ್ಬಂದಿಗೆ ಅನುಕೂಲವಾಗುವಂತೆ ಮಧ್ಯಾಹ್ನದ ಊಟದ ವ್ಯವಸ್ಥೆ ಆರಂಭಿಸಲಾಗಿದೆ. ಪ್ರತಿನಿತ್ಯ ಕನಿಷ್ಠ 250ರಿಂದ 300 ಸಿಬ್ಬಂದಿಗೆ ವ್ಯವಸ್ಥೆ ಮಾಡಲು ಸದ್ಯ ನಿರ್ಧರಿಸಿದ್ದು, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉತ್ತರ ಕರ್ನಾಟಕದ 1000ಕ್ಕೂ ಅಧಿಕ ಸಿಬ್ಬಂದಿ ಸೇರಿದಂತೆ 2000ದಷ್ಟು ಸಿಬ್ಬಂದಿ ಸೇವೆಯಲ್ಲಿದ್ದಾರೆ.
ಇಲಾಖೆಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಬಹಳಷ್ಟು ಯುವಕರು, ಅವಿವಾಹಿತರಿದ್ದು, ಕೆಲವರು ತಮ್ಮ ಪಾಲಕರ ಜತೆ ಇಲ್ಲೇ ವಾಸವಾಗಿದ್ದರು. ಆದರೆ ಕೋವಿಡ್ ಕಾರಣದಿಂದ ಹಲವರು ಕುಟುಂಬಸ್ಥರನ್ನು ಊರಿಗೆ ಕಳುಹಿಸಿದ್ದಾರೆ. ಸದ್ಯ ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುವ ವ್ಯವಸ್ಥೆ ಇಲ್ಲ. ಹಾಗಾಗಿ ಸಿಬ್ಬಂದಿಗೆ ತೊಂದರೆಯಾಗುವುದು ಗಮನಕ್ಕೆ ಬಂದ ಕಾರಣ ಈ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ನಿಯಮ ಪಾಲನೆಯೊಂದಿಗೆ ಇಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ತನಕ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಕಮಿಷನರೇಟ್ ಕಚೇರಿ ಆವರಣದಲ್ಲಿ ಕ್ಯಾಂಟೀನ್ ತೆರೆಯಲಾಗಿದೆ. ಬಿಸಿ, ಶುಚಿಕರ, ಪೌಷ್ಟಿಕ ಆಹಾರ ಪೂರೈಕೆ ಆರಂಭಿಸಲಾಗಿದೆ. ಅಗತ್ಯ ಬಿದ್ದಲ್ಲಿ ರಾತ್ರಿಯೂ ವ್ಯವಸ್ಥೆ ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ. ಹೋಂಗಾರ್ಡ್ ಸೇರಿದಂತೆ ಪೊಲೀಸ್ ಸಿಬ್ಬಂದಿಯಲ್ಲೇ ಕೆಲವರು ಸ್ವ ಇಚ್ಛೆಯಿಂದ ಅಡುಗೆ ತಯಾರಿಸಲು ಮುಂದಾಗಿದ್ದಾರೆ. ಇದು ಎಷ್ಟು ದಿನ ಮುಂದುವರಿಸಲು ಸಾಧ್ಯವೋ ಅಲ್ಲಿಯವರೆಗೆ ನಡೆಸಲಾಗುವುದು. ಸದ್ಯ ನಾವೇ ವೆಚ್ಚ ಭರಿಸಿಕೊಂಡು ಈ ಕಾರ್ಯ ಆರಂಭಿಸಿದ್ದೇವೆ. ಎನ್.ಶಶಿಕುಮಾರ್ ಮಂಗಳೂರು ಪೊಲೀಸ್ ಆಯುಕ್ತ