

ಗೋಕರ್ಣ: ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳ ಸಂದೇಶಗಳನ್ನು ಪಾಲಿಸಿದರೆ ಸ್ವಸ್ಥ್ಯ ಮತ್ತು ಸದೃಢ ಸಮಾಜ ನಿರ್ವಣವಾಗುತ್ತದೆ. ಮಹಾಕಾವ್ಯಗಳು ಕೇವಲ ನೀತಿ ಕಥೆಗಳು ಮಾತ್ರವಲ್ಲ. ವಿದ್ಯಾರ್ಥಿಗಳ ಬದುಕನ್ನು ಸಕಾರಾತ್ಮಕವಾಗಿಸಿ ಭವಿಷ್ಯ ಉಜ್ವಲವಾಗಿಸುವ ಮಹಾನ್ ಸಾಧನಗಳಾಗಿವೆ ಎಂದು ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಡಾ.ರಾಜೇಂದ್ರ ಎಸ್. ನಾಯಕ ಹೇಳಿದರು.
ಹತ್ತಿರದ ಬಂಕಿಕೊಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಮತ್ತು ಪಾಲಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಶಾಲೆಯ ಹಳೆಯ ವಿದ್ಯಾರ್ಥಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಹಾಯಕ ಪ್ರಾಧ್ಯಾಪಕ ರಾಮಚಂದ್ರ ಅಂಕೋಲೆಕರ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಶಾಲಾ ಆಡಳಿತ ಮಂಡಳಿ ಸದಸ್ಯೆ ಜ್ಯೋತ್ಸಾ್ನ ಕಾಗಾಲ ಮಾತನಾಡಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ವಿವೇಕ ನಾಡ್ಕರ್ಣಿ, ಸದಸ್ಯ ಬಿ.ವಿ. ನಾಯಕ, ನಿವೃತ್ತ ಶಿಕ್ಷಕ ಎನ್.ವಿ. ಜನ್ನು, ಗ್ರಾಪಂ ಉಪಾಧ್ಯಕ್ಷೆ ಭಾರತಿ ಆರ್. ನಾಯ್ಕ ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕ ಗಂಗಾಧರ ಭಟ್ಟ ಸ್ವಾಗತಿಸಿದರು. ಶಿಕ್ಷಕರಾದ ಆದಿನಾರಾಯಣ ಬಿ.ಕವರಿ, ಶ್ಯಾಮಲಾಕುಮಾರಿ ಕೆ., ಡಿ.ಕೆ. ಗೌಡ, ಗಾಯತ್ರಿ ಚಿತ್ತಾಲ, ದಯಾನಂದ ಗೌಡ, ಸಿದ್ದರಾಮಪ್ಪ ಬಟಕುರ್ಕಿ, ಗಿರೀಶ ಹೆಬ್ಬಾರ ನಿರ್ವಹಿಸಿದರು.