

ಹುಬ್ಬಳ್ಳಿ : ವಿದ್ಯಾರ್ಥಿಗಳು ಚಟಗಳನ್ನು ಪಾಲನೆ ಮಾಡಬಾರದು. ಸ್ವಾಮಿ ವಿವೇಕಾನಂದರು ಮತ್ತು ಅವರ ಚಿಂತನೆಗಳನ್ನು ಪಾಲನೆ ಮಾಡಬೇಕು. ಚಟಗಳಿಂದ ದೂರ ಇರಬೇಕು. ಸಮಾಜಮುಖಿಯಾಗಬೇಕು ಎಂದು ಎಸ್.ಎಸ್. ಶೆಟ್ಟರ್ ಫೌಂಡೇಶನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಹೇಳಿದರು.
ಎಸ್.ಎಸ್. ಶೆಟ್ಟರ್ ಫೌಂಡೇಶನ್ ಹಾಗೂ ಕನಕದಾಸ ಶಿಕ್ಷಣ ಸಮಿತಿ ವತಿಯಿಂದ ನಗರದ ಕೆ.ಎಸ್.ಎಸ್. ಮಹಾವಿದ್ಯಾಲಯದ ದಂಡಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಶಾ ಮುಕ್ತ ಹುಬ್ಬಳ್ಳಿ’ ಅಭಿಯಾನದಲ್ಲಿ ಅವರು ಮಾತನಾಡಿದರು.
ಈಗಿನ ಯುವಕರಲ್ಲಿ ಮೊಬೈಲ್ ಪೋನ್ ಬಳಕೆಯು ಹೆಚ್ಚಾಗಿದ್ದು, ಕಡಿಮೆ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಭಾರತ ಅಭಿವೃದ್ಧಿ ಆಗಬೇಕು, ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಬರಬೇಕು ಎಂದರೆ ವಿದ್ಯಾರ್ಥಿಗಳು ನಶೆಯನ್ನು ಮಾಡದೆ ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಹೇಳಿದರು.
ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ನಶೆಯ ದಾಸರಾಗಬಾರದು, ಜಾಗೃತರಾಗಬೇಕು ಮತ್ತು ಆದರ್ಶ ವ್ಯಕ್ತಿಗಳ ವ್ಯಕ್ತಿತ್ವವನ್ನು ಪಾಲಿಸಿದಾಗ ಮಾತ್ರ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಸಲಹೆ ನೀಡಿದರು.
ವೈದ್ಯ ಡಾ. ಅಸಾದುಲ್ಲಾ ಕಾರಿಗಾರ ಮಾತನಾಡಿ, ಯುವಕರು ಡ್ರಗ್ಸ್ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯಾನಗರ ಪೋಲಿಸ್ ಠಾಣೆ ಎಎಸ್ಐ ಬಸವರಾಜ ಕಿತ್ತೂರು ಹಾಗೂ ಪ್ರಾಚಾರ್ಯ ಸಂದೀಪ ಬೂದಿಹಾಳ ಮಾತನಾಡಿದರು.
ಪದವಿ ವಿಭಾಗದ ಪ್ರಾಚಾರ್ಯ ಡಾ ಬಸವರಾಜ ಮಡ್ಲಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬೀರೇಶ ತಿರಕಪ್ಪನವರ, ಸಂಯೋಜಕ ಬಸವರಾಜ ದೇವರಮನಿ, ಫೌಂಡೇಶನ್ ಸದಸ್ಯರಾದ ಅಭಿ ಮುಪರ್ಲಾ, ಸಿದ್ದು ಪರಣ್ಣವರ, ಚಂದ್ರಶೇಖರ ವಡ್ಡಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.