ಸಂಸ್ಕೃತ, ಸಾಹಿತ್ಯದ ಉಪದೇಶಗಳನ್ನು ಪಾಲಿಸಿ

28sri-1 (1)
Published on

ಶೃಂಗೇರಿ: ವಿದ್ಯಾರ್ಥಿಗಳು ಸಂಸ್ಕೃತ, ಸಾಹಿತ್ಯದ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ತಮ್ಮ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಯಕ್ಷಗಾನ ಕಲಾವಿದ ಜರ್ನಾಧನ ಮಂಡಗಾರು ಹೇಳಿದರು.
ಶೃಂಗೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಂಸ್ಕೃತ ಪ್ರತಿಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತ ಸಾಹಿತ್ಯದಲ್ಲಿ ಪ್ರತಿಪಾದಿಸಿರುವ ಮಾತೃದೇವೋ ಭವ, ಪಿತೃದೇವೋ ಭವ ಮುಂತಾದ ಉಪದೇಶವಾಕ್ಯಗಳನ್ನು ಅರ್ಥ ಪೂರ್ವಕವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಪಾಲಕರನ್ನು ಗೌರವಿಸಿ, ಅವರು ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕು. ಗುರುಹಿರಿಯರನ್ನು ಗೌರವಿಸಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜತೆಗೆ ಸಂಸ್ಕೃತಿ ಹಾಗೂ ಸಂಸ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಸ್ಕೃತ ಸಾಹಿತ್ಯವನ್ನು ಚೆನ್ನಾಗಿ ಓದಿ ಅದರಲ್ಲಿರುವ ಶಬ್ದ ಸಂಪತ್ತನ್ನು ಅರಿಯಬೇಕು. ಕನ್ನಡದಲ್ಲಿ ಅನೇಕ ಸಂಸ್ಕೃತ ಶಬ್ದಗಳು ಹಾಸು ಹೊಕ್ಕಾಗಿವೆ. ಸಂಸ್ಕೃತ ಮೂಲ ಶಬ್ದಗಳ ಸರಿಯಾದ ತಿಳುವಳಿಕೆಯಿಲ್ಲದೇ ಅವನ್ನು ಬಳಸುವಾಗ ತಪ್ಪುಗಳಾಗುತ್ತವೆ. ಸಂಸ್ಕೃತ ಜ್ಞಾನದ ಬೆಂಬಲದೊಂದಿಗೆ ಅವುಗಳನ್ನು ಬಳಸಿದರೆ ಯಾವುದೇ ಪ್ರಮಾದಗಳು ಆಗುವುದಿಲ್ಲ ಎಂದು ವಿವರಿಸಿದರು.
ಉತ್ತಮ ಟಿಪ್ಪಣಿ ಪುಸ್ತಕ ಸ್ಪರ್ಧೆ, ಸಂಸ್ಕೃತ ಲೇಖನ ಸ್ಪರ್ಧೆ ಹಾಗೂ ಸಂಸ್ಕೃತ ಸಂಭಾಷಣೆ ಸ್ಪರ್ಧೆಗಳು ಹಾಗೂ ಮಕ್ಕಳಿಂದ ಸಂಸ್ಕೃತ ಪ್ರಹಸನ, ಹಾಡು, ಭಾಷಣ ಮುಂತಾದ ಪ್ರತಿಭಾ ಪ್ರದರ್ಶನಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net