ಭೂ ಸಂರಕ್ಷಣೆಗೆ ವೈಜ್ಞಾನಿಕ ಮಾನದಂಡ ಅನುಸರಿಸಿ

legacy waste
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಭೂಮಿಯನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕಾದರೆ ಮಣ್ಣು ಮತ್ತು ಅಲ್ಲಿಯ ಜೀವಿಗಳ ಸಂರಕ್ಷಣೆಗೆ ವೈಜ್ಞಾನಿಕ ಮಾನದಂಡ ಅನುಸರಿಸಬೇಕು ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಕೆ. ನಾಯ್ಕ ಹೇಳಿದರು.

ನಗರದ ಕೆಎಲ್​ಇ ತಾಂತ್ರಿಕ ವಿವಿಯ ಸ್ಕೂಲ್ ಆಫ್​ಆರ್ಕಿಟೆಕ್ಚರ್​ನ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಜೈವಿಕ ಪರಿಹಾರ ಮತ್ತು ಜೈವಿಕ ಗಣಿಗಾರಿಕೆಯಿಂದ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಜನಸಂಖ್ಯೆಯ ಕಾರಣದಿಂದ ದೇಶದಲ್ಲಿ ತ್ಯಾಜ್ಯ ವಿಲೇವಾರಿ ಸವಾಲಿನ ಕೆಲಸವಾಗಿದೆ. ದೇಶದ 142 ಕೋಟಿ ಜನರ ಅಗತ್ಯಗಳನ್ನು ಪೂರೈಸುವ ಶಕ್ತಿ ಭೂಮಿಗೆ ಇದೆ. ಆದರೆ ಮನುಷ್ಯನ ದುರಾಸೆಗಳನ್ನಲ್ಲ ಎಂದರು.

ಉದ್ಘಾಟನೆ ನೆರವೇರಿಸಿದ ಕಪ್ಪತಗುಡ್ಡ ನಂದಿವೇರಿ ಮಹಾಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ಮೊದಲು ಒಕ್ಕಲುತನ ಶ್ರೇಷ್ಠ-ವ್ಯಾಪಾರ ಮಧ್ಯಮ-ನೌಕರಿ ಕನಿಷ್ಠ ಎಂಬ ಸ್ಥಿತಿಯಿತ್ತು. ಇಂದು ಇದು ಉಲ್ಟಾ ಆಗಿದೆ. ಒಕ್ಕಲುತನ ಮಾಡುವವನಿಗೆ ಹೆಣ್ಣು ಕೊಡದ ಸ್ಥಿತಿ ತಲುಪಿದ್ದೇವೆ. ವಿದ್ಯಾವಂತರು ಸ್ವಾರ್ಥಿಗಳಾಗಿದ್ದು, ಸಮಾಜದ ಕಡೆ ನೋಡುತ್ತಿಲ್ಲ. ಪರಿಸರವನ್ನು ನಿರ್ಲಕ್ಷಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಬಸವರಾಜ ಅನಾಮಿ ಮಾತನಾಡಿ, ನಿತ್ಯ ಉತ್ಪಾದನೆಯಾಗುವ ತ್ಯಾಜ್ಯ ಹಾಗೂ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿ ಮಾಡುವ ಗುರುತರ ಸವಾಲು ನಮ್ಮ ಮುಂದಿದೆ. ತ್ಯಾಜ್ಯವನ್ನು ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಮರು ಬಳಕೆ ಮಾಡುವ ತಂತ್ರಜ್ಞಾನಕ್ಕೆ ಮೊರೆ ಹೋಗಬೇಕಿದೆ. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವುದರ ಜತೆಗೆ ಅದರ ಮರು ಬಳಕೆ ಹಾಗೂ ರಿಸೈಕಲ್ ಮಾಡಬೇಕಿದೆ ಎಂದರು.

ಕಾಶುಟೆಕ್ ಯೋಜನಾ ನಿರ್ದೇಶಕ ಶರಣಬಸಪ್ಪ ಪಟ್ಟೇದ ಮಾತನಾಡಿ, ಪ್ರತಿ ವ್ಯಕ್ತಿ ನಿತ್ಯ 250 ಗ್ರಾಂ ಕಸ ಉತ್ಪತ್ತಿ ಮಾಡುತ್ತಾನೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ನಿರ್ಲಕ್ಷಿಸಿದರೆ ಉಳಿಗಾಲವಿಲ್ಲ ಎಂದು ಅಭಿಪ್ರಾಯಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಸಿವಿಲ್ ಇಂಜಿನಿಯರಿಂಗ್ ಮುಖ್ಯಸ್ಥ ಡಾ.ಮನೋಜಕುಮಾರ ಚಿತವಾಡಗಿ ಮಾತನಾಡಿ, ತ್ಯಾಜ್ಯ ನಿರ್ವಹಣೆ ಎಂಬುದು ಸಿವಿಲ್ ಇಂಜಿನಿಯರಿಂಗ್​ಗೆ ಸೀಮಿತವಾದ ಸಮಸ್ಯೆ ಅಲ್ಲ. ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಹಾಗಾಗಿ ಎಲ್ಲರೂ ಕೈ ಜೋಡಿಸಬೇಕು. ಕೆಎಲ್​ಇ ವಿವಿಯಲ್ಲಿ ಪರಿಸರ ಸ್ನೇಹಿ ಸಾಮಗ್ರಿಗಳ ಬಳಕೆಗಾಗಿ ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದರು.

ಡಾ. ಎಂ. ಆರ್. ಪಾಟೀಲ ಸ್ವಾಗತಿಸಿದರು. ಪಾರಂಪರಿಕ ತ್ಯಾಜ್ಯದ ಪ್ರಸ್ತುತ ಸ್ಥಿತಿ ಹಾಗೂ ಪರಿಸರದ ಮೇಲೆ ಅದರ ಪರಿಣಾಮದ ಕುರಿತು ಶ್ರೀಮತಿ ದಾಕ್ಷಾಯಿಣಿ ಜಾಬಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿದರು. ಕರ್ನಾಟರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ. ಎಚ್. ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net