ಸೇವಾವಧಿ ಕಡೆವರೆಗೂ ವೃತ್ತಿ ಧರ್ಮ ಪಾಲಿಸಿ

1004566988
Published on

ನೂತನ ಪೊಲೀಸ್ ಸಿಬ್ಬಂದಿಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆಲೋಕ್‌ಕುಮಾರ್ ಸಲಹೆ

ಚನ್ನಪಟ್ಟಣ:ಪೊಲೀಸ್ ವೃತ್ತಿ ಪವಿತ್ರವಾದುದು. ಸೇವಾವಧಿ ಕಟ್ಟಕಡೆಯ ದಿನದವರೆಗೂ ವೃತ್ತಿ ಧರ್ಮ ಪಾಲಿಸುವ ಜತೆಗೆ ಸಮಾಜವನ್ನು ಸರಿಸಮಾನವಾಗಿ ನೋಡಬೇಕು. ಬಡವ, ಶ್ರೀಮಂತ, ಮೇಲು-ಕೀಳು ಭಾವ ಕಿಂಚಿತ್ತೂ ನಮ್ಮ ಕಡೆ ಸುಳಿಯಲು ಬಿಡಬಾರದು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ತರಬೇತಿ) ಆಲೋಕ್‌ಕುಮಾರ್ ಸಲಹೆ ನೀಡಿದರು.

ತಾಲೂಕಿನ ವಂದಾರಗುಪ್ಪೆ ಬಳಿಯ ರಾಜ್ಯ ಪೊಲೀಸ್ ತರಬೇತಿ ಶಾಲೆ (ಪಿಟಿಎಸ್)ಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 68ನೇ ತಂಡದ ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮ ಜೀವನದಲ್ಲಿ ಇದೊಂದು ಮರೆಯಲಾರದ ದಿನ. ತಂದೆ-ತಾಯಿಯ ಪುಣ್ಯದ ಫಲ ನೀವಿಂದು ಸರ್ಕಾರಿ ನೌಕರರಾಗಿದ್ದೀರಿ. ನಿಮ್ಮ ಹೊಸ ಬದುಕಿಗೆ ಸಿಕ್ಕಿರುವ ಈ ದಾರಿಯಲ್ಲಿ ಉತ್ತಮವಾಗಿ ಸಾಗಿ, ಕುಟುಂಬ ಹಾಗೂ ದೇಶಕ್ಕೆ ಆಸ್ತಿಯಾಗಿ ಎಂದು ಕಿವಿಮಾತು ಹೇಳಿದರು.

ಇಲಾಖೆಯಲ್ಲಿ ಕೆಲಸ ಮಾಡಬೇಕಾದ ಪ್ರತಿಯೊಂದರ ಬಗ್ಗೆಯೂ ತರಬೇತಿ ನೀಡಲಾಗಿದೆ. ಈಗ ನಿಮ್ಮ ಜವಾಬ್ದಾರಿ ಮಹತ್ತರವಾಗಿದೆ. ನಿಮಗೆ ನೀಡಿರುವ ವೃತ್ತಿಪರ ಜೀವನ, ವೈಯಕ್ತಿಕ ತರಬೇತಿಯನ್ನು ಸೇವಾವಧಿಯಲ್ಲಿ ಸದುಪಯೋಗಪಡಿಸಿಕೊಳ್ಳಿ. ಅದರಲ್ಲೂ ಪ್ರಸ್ತುತ ಸೈಬರ್ ಅಪರಾಧಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ, ಇದರ ಬಗ್ಗೆ ಹೆಚ್ಚಿನ ನಿಗಾವಹಿಸಿ, ಕಾಲಘಟ್ಟ ಬದಲಾದಂತೆ ಇಲಾಖೆ ಕೆಲಸಗಳು ಅಧಿಕಗೊಳ್ಳುತ್ತಿವೆ, ಎಲ್ಲವನ್ನೂ ಉತ್ತಮ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು.

ಕಲಬುರಗಿ ಪಿಟಿಎಸ್ ಪೊಲೀಸ್ ಅಧೀಕ್ಷಕ ಡೆಕ್ಕಾ ಕಿಶೋರ್ ಬಾಬು, ಮೈಸೂರು ಕೆಪಿಎ ಉಪ ನಿರ್ದೇಶಕ ಚನ್ನಬಸವಣ್ಣ, ಮೈಸೂರು ಪಿಟಿಎಸ್ ಪೊಲೀಸ್ ಅಧೀಕ್ಷಕಿ ಎಂ.ಎಸ್.ಗೀತಾ, ಚನ್ನಪಟ್ಟಣ ಪಿಟಿಎಸ್ ಪ್ರಭಾರ ಪ್ರಾಂಶುಪಾಲ ಟಿ.ಕುಮಾರ್, ಅಧಿಕಾರಿಗಳಾದ ರಾಮಚಂದ್ರಯ್ಯ, ಪಾಪಣ್ಣ, ಸಿದ್ದನಗೌಡ ಪಾಟೀಲ್ ಹಾಗೂ ಇತರರು ಇದ್ದರು.

ಸಾಮರ್ಥ್ಯ ಪರೀಕ್ಷೆ ಕಡ್ಡಾಯಗೊಳಿಸಲು ಕ್ರಮ:ಇಲಾಖೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇರುವುದು ಸತ್ಯ. ಆದರೂ ಸೇವೆಯ ಗುಣಮಟ್ಟದ ಸುಧಾರಣೆಗೂ ಹೆಚ್ಚು ಒತ್ತು ನೀಡಬೇಕು. ಕಳಪೆ ಮಾನವ ಸಂಪನ್ಮೂಲ ಸುಧಾರಿಸಬೇಕು ಎಂಬುದೇ ನಮ್ಮ ಆಶಯ. ಇಲಾಖೆಗೆ ಸೇರಲು ಇರುವ ನಿಯಮಗಳು, ಪದೋನ್ನತಿ ನೀಡುವಾಗ ಇಲ್ಲವಾಗಿವೆ. ಈ ಹಿನ್ನೆಲೆಯಲ್ಲಿ ಪದೋನ್ನತಿ ನೀಡುವಾಗಲೂ ಸಾಮರ್ಥ್ಯ ಪರೀಕ್ಷೆ ಕಡ್ಡಾಯಗೊಳಿಸುವ ಚಿಂತನೆ ನಡೆಯುತ್ತಿದೆ ಎಂದು ಅಲೋಕ್‌ಕುಮಾರ್ ಮಾಹಿತಿ ನೀಡಿದರು.

ಎಚ್ಚರಿಕೆ ಇರಲಿ:ವೃತ್ತಿ ಜೀವನವನ್ನು ಆಸೆಗಳಿಗೆ ಬಲಿ ಕೊಡಬೇಡಿ. ಇಲಾಖೆಯ ಹಲವಾರು ಸಿಬ್ಬಂದಿ ಹಾಗೂ ಅಧಿಕಾರಿಗಳು ತಪ್ಪು ಮಾಡಿ ಸಿಕ್ಕಿಬಿದ್ದಿರುವ ನಿದರ್ಶನಗಳು ಸಾಕಷ್ಟಿವೆ. ಕಳಂಕಿತರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬಾರದು. ಮಾರುಕಟ್ಟೆಯಲ್ಲಿ ಪ್ರತಿವಸ್ತುವಿಗೂ ಗ್ಯಾರಂಟಿ ಕಾರ್ಡ್ ಇರುತ್ತದೆ. ನಿಮ್ಮ ಬಳಿಯೂ ಅದೇ ರೀತಿಯ ಗ್ಯಾರಂಟಿಯನ್ನು ನಾವು ಪಡೆದಿದ್ದೇವೆ. ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದೇ ಆ ಗ್ಯಾರಂಟಿ ಉಳಿಸಿಕೊಳ್ಳಿ. ಆರೋಗ್ಯ, ಕುಟುಂಬದ ಆರೋಗ್ಯ ಹಾಗೂ ಕೌಟುಂಬಿಕ ಜವಾಬ್ದಾರಿಗೂ ಸಮಯ ನೀಡಿ ಎಂದು ಅಲೋಕ್‌ಕುಮಾರ್ ಶುಭ ಹಾರೈಸಿದರು.

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪಿಟಿಎಸ್:ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಇಲಾಖೆಗೆ ಸೇರಿ ಹತ್ತು ತಿಂಗಳ ತರಬೇತಿ ಪಡೆದ 348 ಪ್ರಶಿಕ್ಷಣಾರ್ಥಿಗಳ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕುಟುಂಬದ ಕುಡಿ ಖಾಕಿ ಬಟ್ಟೆಯಲ್ಲಿರುವುದನ್ನು ಕಂಡು ಸಂಭ್ರಮಿಸಿದರು. ಬಹುತೇಕ ಉತ್ತರ ಕರ್ನಾಟಕದವರೇ ಹೆಚ್ಚಾಗಿದ್ದದ್ದು ವಿಶೇಷ. ದೂರದ ಊರುಗಳಿಂದ ಬಂಧುಬಳಗದ ಸಮೇತ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ನಿರ್ಗಮನ ಪಥ ಸಂಚಲನ ಮುಕ್ತಾಯಗೊಂಡ ತರುವಾಯ, ಸೇವೆಗೆ ಸಜ್ಜಾಗಿ ನಿಂತಿರುವ ನೂತನ ಪೊಲೀಸ್ ಸಿಬ್ಬಂದಿ ಕುಟುಂಬಸ್ಥರನ್ನು ಅಲಂಗಿಸಿ, ಸಂತಷ ಹಂಚಿಕೊಂಡರು. ಈ ವೇಳೆ ಬಹುತೇಕ ಮಂದಿ ಭಾವುಕರಾದರು. ಇನ್ನೂ ಕೆಲವರು ಖಾಕಿ ಬಟ್ಟೆಯಲ್ಲಿ ಕುಟುಂಬಸ್ಥರ ಜತೆಗೆ ಫೋಟೋಗೆ ಪೋಸ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net