

ವಿಜಯಪುರ: ಬಸವಣ್ಣನವರು ಪ್ರಚುರಪಡಿಸಿದ ಕಾಯಕ, ದಾಸೋಹ, ಸಮಾನತೆ, ಅರಿವು ಮತ್ತು ಆಚಾರವೆಂಬ ಪಂಚಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜತೆಗೆ ಶರಣರು ಸಾರಿದ ತತ್ವಗಳನ್ನು ಎಲ್ಲರೂ ಪಾಲಿಸಬೇಕೆಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ನಗರದ ವಜ್ರಹನುಮಾನ ಬಡಾವಣೆಯಲ್ಲಿ ಶನಿವಾರ ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ ‘ಹರ್ಡೇಕರ ಮಂಜಪ್ಪರವರ ಶ್ರೀ ಬಸವ ಚರಿತ್ರೆ ಪುಸ್ತಕ ಪರಿಚಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಮನುಷ್ಯ-ಮನುಷ್ಯರ ನಡುವೆ ಸೌಹಾರ್ದದ ಸೂತ್ರವೇ ಹರಿದು ಹೋಗಿ ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ದ್ವೀಪವಾದಂತಾಗಿದೆ. ಬಸವಣ್ಣನವರು ಅಂದು ಸಾರಿದ ವಿಶ್ವಪ್ರೇಮದ ತತ್ವಾದರ್ಶ ಇಂದಿಗೂ ಪ್ರಸ್ತುತವಾಗಿದೆ. ಹರ್ಡೇಕರ ಮಂಜಪ್ಪನವರು ಶ್ರೀ ಬಸವ ಚರಿತ್ರೆ ಕೃತಿಯಲ್ಲಿ ಬಸವಣ್ಣವರನ್ನು ಕೇಂದ್ರವಾಗಿರಿಸಿ ಸಮಗ್ರ ಶರಣಯುಗದ ಅವಲೋಕನ ಮಾಡಿದ್ದಾರೆ. ಜತೆಗೆ ಅವರ ಕೂಡಲಸಂಗಮ ಯಾತ್ರೆ, ಕಲ್ಯಾಣ ಶರಣರೊಂದಿಗಿನ ಒಡನಾಟ, ವಚನ ರಚನೆ, ಸಾಮಾಜಿಕ ಸಮಾನತೆಗಾಗಿ ನಡೆದ ಹೋರಾಟ ಮತ್ತು ಮರಳಿ ಕೂಡಲಸಂಗಮ ಕಡೆ ಬಂದ ಬಗ್ಗೆ ವೈಚಾರಿಕ ಚಿತ್ರಣವನ್ನು ಓದುಗರಿಗೆ ನೀಡಿದ್ದು ಅದ್ಭುತವಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಲ್ಹಾರದ ಸಂಗಮೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ರಾಜಶೇಖರ ಉಮರಾಣಿ ಮಾತನಾಡಿ, ಮನುಕುಲದ ಸರ್ವರಂಗದ ಸ್ವಾತಂತ್ರೃಕ್ಕಾಗಿ, ಜನ ಸಾಮಾನ್ಯರ ಏಳಿಗೆಗಾಗಿ ಅವತರಿಸಿದ ಮನುಕುಲೋದ್ಧಾರಿ ಬಸವಣ್ಣನವರು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪ್ಪಾರ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಪರಸಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಓದುಗರ ಚಾವಡಿಯ ಅಧ್ಯಕ್ಷ ಬಿ.ಆರ್. ಬನಸೋಡೆ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಡಾ. ಎಂ.ಎಸ್. ಮಾಗಣಗೇರಿ, ದಾಕ್ಷಾಯಿಣಿ ಬಿರಾದಾರ, ಮನು ಪತ್ತಾರ, ಶರಣು ಸಬರದ, ಆರ್.ಎಸ್. ಪಟ್ಟಣಶೆಟ್ಟಿ, ಶರಣಗೌಡ ಪಾಟೀಲ, ಸುಭಾಷ ಯಾದವಾಡ, ಸುಜಾತಾ ಚಲವಾದಿ ಮತ್ತಿತರರಿದ್ದರು. ಸುಭಾಸ ಕನ್ನೂರ ನಿರ್ವಹಿಸಿದರು. ಯು.ಎನ್. ಕುಂಟೋಜಿ ವಂದಿಸಿದರು.