ಪಾರದರ್ಶಕ ಚುನಾವಣೆಗೆ ಮಾದರಿ ನೀತಿ ಸಂಹಿತೆ ಪಾಲಿಸಿ

Follow the model code of conduct for transparent elections
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಇದ್ದರು.
Published on

ಬಾಗಲಕೋಟೆ: ಲೋಕಸಭಾ ಚುನಾವಣೆಗಾಗಿ ಶೀಘ್ರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ನ್ಯಾಯಸಮ್ಮತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ವಿವಿಧ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣಾ ಮಾದರಿ ನೀತಿ ಸಂಹಿತೆ ಪ್ರತಿ ಚುನಾವಣೆಯಲ್ಲೂ ಪಾಲಿಸುವಂತಹದ್ದು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಅನಗತ್ಯವಾಗಿ ಯಾವುದೇ ರಾಜಕೀಯ ಪಕ್ಷಗಳು ಗೊಂದಲಗಳನ್ನು ಹುಟ್ಟು ಹಾಕದೆ ಒಳಗೊಳ್ಳುವಿಕೆಯೊಂದಿಗೆ ಚುನಾವಣೆ ನಡೆಸಲು ಸಹಕಾರ ನೀಡಬೇಕು ಎಂದರು.

ಪಾರದರ್ಶಕ ಚುನಾವಣೆ ನಡೆಸಲು, ರಾಜಕೀಯ ಪಕ್ಷಗಳು ಪಕ್ಷದ ಕಾರ್ಯಕರ್ತರಲ್ಲಿ ಅರಿವು ಮೂಡಿಸುವ, ಚುನಾವಣಾ ಚಟುವಟಿಕೆ ಕುರಿತು ಶಿಕ್ಷಣ ನೀಡುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣ ಸಾರ್ವಜನಿಕ ಸಭೆ, ಸಮಾರಂಭ, ರ‌್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಪಕ್ಷದ ತಾತ್ಕಾಲಿಕ ಕಚೇರಿ, ಹೆಲಿಕಾಪ್ಟ್‌ರ ಹಾಗೂ ಹೆಲಿಪ್ಯಾಡ್ ಹಾಗೂ ಇನ್ನಿತರ ನಿಯಮಗಳಿಗೆ ಸುವಿದಾ ತಂತ್ರಾಂಶ ಮೂಲಕ ಅನುಮತಿ ಪಡೆಯಬೇಕು ಎಂದರು.

ಬರುವ ಲೋಕಸಭಾ ಚುನಾಣೆಯಲ್ಲಿ ಅಭ್ಯರ್ಥಿಗಳು ಒಟ್ಟು 95 ಲಕ್ಷ ರೂ.ವರೆಗೆ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಅಭ್ಯರ್ಥಿಗಳು ಚುನಾವಣಾ ಜಾಹೀರಾತು ನೀಡಬೇಕಾದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಎಂಸಿಎಂಸಿ ತಂಡಕ್ಕೆ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯಬೇಕು. ಪೇಡ್ ನ್ಯೂಸ್ ಕೂಡ್ ಎಂಸಿಎಂಸಿ ವ್ಯಾಪ್ತಿಯಲ್ಲಿರುತ್ತದೆ. ಅಧಿಕಾರದಲ್ಲಿರುವ ಪಕ್ಷವು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net