

ಚಾಮರಾಜನಗರ : ಕಲೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಪ್ರತಿಯೊಬ್ಬರೂ ವಿಶ್ವಕರ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.
ಹನೂರು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ವಿಶ್ವಕರ್ಮರು ಸಮಾಜದ ಉದ್ಧಾರಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಜನರ ಕಷ್ಟಗಳಿಗೆ ದನಿಯಾಗಿದ್ದರು. ಸಮಾಜದ ಕಲ್ಯಾಣಕ್ಕೆ ತಮ್ಮ ಸೇವೆ ಪಣವಾಗಿಟ್ಟಿದ್ದರು. ವೇದ ಪುರಾಣಗಳಲ್ಲಿ ವಿಶ್ವಕರ್ಮರನ್ನು ದೇವರುಗಳ ದೇವರು, ಬ್ರಹ್ಮಾಂಡದ ಸೃಷ್ಟಿಕರ್ತ ಹಾಗೂ ಕಲೆ, ವಾಸ್ತುಶಿಲ್ಪದ ಸೃಷ್ಟಿಕರ್ತ ಎಂದು ಬಣ್ಣಿಸಲಾಗಿದೆ. ಹಾಗಾಗಿ ಇವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಇವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಸರ್ಕಾರದ ಆದೇಶದಂತೆ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಸಮುದಾಯದ ಮುಖಂಡರ ಅಪೇಕ್ಷೆಯಂತೆ ಅ.1 ರಂದು ಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ, ನೌಕರ ಸಿದ್ದರಾಜು, ಮುಖಂಡರಾದ ಕುಮಾರಚಾರಿ, ರಾಜೇಂದ್ರ, ರವೀಂದ್ರ, ಮುತ್ತುರಾಜು ಹಾಗೂ ಇನ್ನಿತರರು ಇದ್ದರು.