ಅಂತರ ಬೆಳೆ ಪದ್ಧತಿ ಅನುಸರಿಸಲಿ

Follow intercropping system
Published on

ಹಾನಗಲ್ಲ: ರೈತರು ಅಂತರ ಬೆಳೆ ಪದ್ಧತಿ ಅನುಸರಿಸಿ ಸಮಗ್ರ ಪೋಷಕಾಂಶ ಬಳಸಿ ಕೃಷಿಗೆ ಮುಂದಾದರೆ ಹೆಚ್ಚು ಆದಾಯ ಪಡೆಯಲು ಸಾಧ್ಯ ಎಂದು ಹನುಮನಮಟ್ಟಿ ಕೃಷಿ ಕೇಂದ್ರದ ತಜ್ಞೆ ಡಾ. ಕೆ.ಆರ್. ಸಿದ್ದಗಂಗಮ್ಮ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.

ಸಾವಯವ ಪದ್ಧತಿಯ ಜತೆಗೆ ರಾಸಾಯನಿಕಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಿದರೆ ತಪ್ಪಿಲ್ಲ. ನಮ್ಮ ಕೃಷಿ ಭೂಮಿಯನ್ನು ನಾಳಿನ ಪೀಳಿಗೆಗೂ ಉಳಿಸಬೇಕಿದೆ. ಭೂಮಿ ಫಲವತ್ತತೆ ಹಾಳಾಗದಂತೆ ಕಾಳಜಿ ವಹಿಸಬೇಕಾಗಿದೆ. ರೈತರು ಅಂತರ್ ಬೆಳೆ ಪದ್ಧತಿ ಅನುಸರಿಸುವುದರಿಂದ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಬಿತ್ತನೆ ಬೀಜಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕೃಷಿಕ ಸಮಾಜದ ಅಧ್ಯಕ್ಷ ಕೆ.ಟಿ. ಕಲಗೌಡರ ಮಾತನಾಡಿ, ಇತ್ತೀಚೆಗೆ ತಾಲೂಕಿನಲ್ಲಿ ಕೃಷಿಕರನ್ನು ನಿರ್ಲಕ್ಷಿಸುವ ಸಂದರ್ಭಗಳು ಹೆಚ್ಚುತ್ತಿವೆ. ಹಾನಗಲ್ಲಿನಲ್ಲಿ ರೈತ ವೃತ್ತ ಉದ್ಘಾಟನೆಗೆ ರೈತ ಮುಖಂಡರನ್ನು ಹಾಗೂ ಕೃಷಿಕ ಸಮಾಜ ನಿರ್ಲಕ್ಷಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಮಹೇಶ ಬಣಕಾರ ಮಾತನಾಡಿ, ತಾಲೂಕಿನಲ್ಲಿ 114 ಕೃಷಿ ಪರಿಕರ ಮಾರಾಟಗಾರರಿದ್ದಾರೆ. ಸಭೆ ಕರೆದಾಗ ಎಲ್ಲರೂ ಹಾಜರಾಗುವುದಿಲ್ಲ. ಸರ್ಕಾರ ಹಾಗೂ ಇಲಾಖೆಯ ನಿಯಮ ಗಾಳಿಗೆ ತೂರಿ ಸಮಸ್ಯೆಯಲ್ಲಿ ಸಿಕ್ಕಿಕೊಂಡು ಪರದಾಡುತ್ತಿದ್ದಾರೆ. ಮಾರಾಟಗಾರರ ತಪ್ಪಿನಿಂದ ಸ್ಥಳೀಯ ಕೃಷಿ ಅಧಿಕಾರಿಗಳು ಸಮಸ್ಯೆ ಎದುರಿಸುವಂತಾಗುತ್ತದೆ. ಕಾಳಸಂತೆಯಲ್ಲಿ ಹಾಗೂ ನಿಗದಿತ ಬೆಲೆಗಿಂತ ಹೆಚ್ಚು ಬೆಲೆಗೆ ಪರಿಕರ ಮಾರಾಟ ಮಾಡುವುದನ್ನು ಸಂಪೂರ್ಣ ಕೈಬಿಟ್ಟು ಪ್ರಾಮಾಣಿಕವಾಗಿ, ಕಾನೂನಿನಡಿ ವ್ಯಾಪಾರ ಮಾಡಬೇಕು ಎಂದು ಸಲಹೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ರಾಜಕುಮಾರ ಜೋಗಪ್ಪನವರ, ರಾಜೇಶ ಚವ್ಹಾಣ, ಮಹಮ್ಮದ್​ಹನೀಫ ಬಂಕಾಪುರ, ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ಸಣ್ಣಿಂಗಪ್ಪ ಕೊಪ್ಪ, ಜಿಲ್ಲಾ ಪ್ರತಿನಿಧಿ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಸುರೇಶಗೌಡ ಪಾಟೀಲ, ಪಿ.ಕೆ. ಪಾಟೀಲ, ನಾಗಣ್ಣ ಒಡೆಯರ, ಸಂಕನಗೌಡ ದೇವಿಕೊಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ಎಂಎಫ್​ಸಿ ವ್ಯವಸ್ಥಾಪಕ ದೇವರಾಜ ಕುರಿ, ಪ್ರಶಾಂತ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net