

ಪ್ರತಿಯೊಬ್ಬರೂ ಗಾಂಧೀಜಿ ಅವರ ತತ್ವ, ಆದರ್ಶಗಳನ್ನು ಪಾಲಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಹೇಳಿದರು.
ಜೆ.ಎಸ್.ಜಗದೀಶ್ ಸ್ನೇಹ ಬಳಗದ ವತಿಯಿಂದ ನಿವೇದಿತಾನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ‘ಹುತಾತ್ಮ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಹಿಂಸಾತ್ಮಕವಾದ ಹೋರಾಟದ ಮೂಲಕ ದೇಶ ಸ್ವಾತಂತ್ರ್ಯ ಗಳಿಸಿದ ನಂತರ ಗಾಂಧೀಜಿ ಅವರ ದೃಷ್ಟಿಕೋನ ಸರ್ವೋದಯವಾಗಿತ್ತು. ಸತ್ಯ, ಅಹಿಂಸೆ, ಅಭಯ, ಶರೀರ ಶ್ರಮ, ಸ್ವದೇಶಿ, ಸಾಮಾಜಿಕ, ಆರ್ಥಿಕ ಸಮಾನತೆ, ಸಾಮಾಜಿಕ ನ್ಯಾಯ ಇವೆಲ್ಲವೂ ಸರ್ವೋದಯ ಸಮಾಜದ ನೆಲೆಯಾಗಿದೆ ಎಂದು ತಿಳಿಸಿದರು.
ಸರ್ವೋದಯದ ದೃಷ್ಟಿಕೋನ ಸಾವಿರಾರು ವರ್ಷಗಳಿಂದಲೂ ಇದೆ. ಗಾಂಧೀಜಿ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ಅವರ ಸ್ನೇ ಹಿತರೊಬ್ಬರು ನೀಡಿದ ಕಿರುಪುಸ್ತಕದ ಅಧ್ಯಯನದ ಮೂಲಕ ಅವರು ಹೊಸ ಸಿದ್ಧಾಂತದ ಚಿಂತನೆಯಲ್ಲಿ ತೊಡಗಿಕೊಂಡರು. ಗಾಂಧೀಜಿ ಅವರು ವಿಶ್ವದ ಶ್ರೇಷ್ಠ ವ್ಯಕ್ತಿ. ಗಾಂಧೀಜಿ ಅವರ ಚಿಂತನೆ ಮತ್ತು ಅವರ ಜೀವನದ ಹಾದಿ ಬಹುಕಠಿಣವಾದದ್ದು ಎಂದು ತಿಳಿಸಿದರು.
ಪ್ರಮುಖರಾದ ಪುರುಷೋತ್ತಮ್, ರವಿ, ಜಯಕುಮಾರ್, ಸತ್ಯಾನಂದ ವಿಟ್ಟು, ಲೋಹಿತ್ ಶರ್ಮ ಇತರರು ಇದ್ದರು.