ಜಾನಪದ ಸಂಪ್ರದಾಯ ಅನುಸರಿಸಿ

8 sirguppa 01
ಸಿರಗುಪ್ಪ ತೆಕ್ಕಲಕೋಟೆ ಶ್ರೀಮತಿ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವವನ್ನು ನೇಗಿಲಿಗೆ ಪೂಜೆ ಮಾಡುವ ಮೂಲಕ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಉದ್ಘಾಟಿಸಿದರು. ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ರೇಣುಕಮ್ಮ ವೆಂಕಟೇಶ, ಕಾಲೇಜು ಪ್ರಾಚಾರ್ಯ ಕೊಟ್ರಪ್ಪ, ಕ.ರಾ.ನೌ.ಸಂಘದ ತಾಲೂಕು ಅಧ್ಯಕ್ಷ ಟಿ.ಹುಚ್ಚೀರಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಂ.ಚಂದ್ರಕಾಂತ ಇತರರಿದ್ದರು.
Published on

ಸಿರಗುಪ್ಪ: ದಿನ ಯುವಕರು ಜಾನಪದ ಕಲೆ, ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯವಿದೆ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ಪಟ್ಟಣದ ತೆಕ್ಕಲಕೋಟೆ ಶ್ರೀಮತಿ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಹಾಗೂ ಸಾಂಸ್ಕೃತಿಕ ಸಮಿತಿ, ಎನ್.ಎಸ್.ಎಸ್ ಘಟಕಗಳು, ಸಾಂಸ್ಕೃತಿಕ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ, ಜೀವನ ಜಾಗೃತಿ ಕಲಾ ಸಂಸ್ಥೆ ಸಹಯೋಗದಲ್ಲಿ ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಘೋಷವಾಕ್ಯದಡಿ ಆಯೋಜಿಸಿದ್ದ ಜಾನಪದ ಉತ್ಸವ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ. ವಿವಿಧ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದಕ್ಕೆ ಹುಟ್ಟು-ಸಾವಿಲ್ಲ. ಈ ದಿಸೆಯಲ್ಲಿ ಯುವಕರು ಇಂದಿನ ಯಾಂತ್ರಿಕ ಜೀವನ ಶೈಲಿ ಬದಿಗಿಟ್ಟು ಜಾನಪದ ಶೈಲಿಯ ಬದುಕನ್ನು ಕಟ್ಟಿಕೊಳ್ಳಬೇಕು. ಪ್ರತಿ ಮನೆಯಲ್ಲಿ ನಮ್ಮ ಜಾನಪದ ಸಂಸ್ಕೃತಿ ಸಂಪ್ರದಾಯಗಳನ್ನು ಅಳವಡಿಸಿಕೊಂಡರೆ ಅದೇ ನಿಜವಾದ ಜಾನಪದದ ಸಂಪತ್ತಾಗುತ್ತದೆ ಎಂದರು.

ಇದಕ್ಕೂ ಮೊದಲು ಕಾಲೇಜು ವಿದ್ಯಾರ್ಥಿಗಳು ವಾದ್ಯಗಳನ್ನು ನುಡಿಸುತ್ತಾ ಹಾಗೂ ವಿದ್ಯಾರ್ಥಿನಿಯರು ಕುಂಭ ಮೇಳದೊಂದಿಗೆ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ವಿಶೇಷ ಅತಿಥಿಗಳನ್ನು ಮತ್ತು ಕಾಲೇಜು ಸಿಬ್ಬಂದಿಯನ್ನು ಬರಮಾಡಿಕೊಂಡು ಸಿರಿ ಧಾನ್ಯಗಳಿಗೆ ಪೂಜೆ ಸಲ್ಲಿಸಿದರು.

ವಿದ್ಯಾರ್ಥಿಗಳಿಗೆ ಜಾನಪದ ಮಹತ್ವ ಸಾರುವ ಉದ್ದೇಶದಿಂದ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಾನಪದ ಸಂಶೋಧಕ ಡಾ.ಆರ್.ಚೇತನ್ ಕುಮಾರ್, ನಿವೃತ್ತ ಉಪನ್ಯಾಸಕ ಶಿವಕುಮಾರ ಎಸ್ ಬಳಿಗಾರ, ಬಯಲಾಟ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ವೀರನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net