

ಲಕ್ಷ್ಮೇಶ್ವರ: ರೈತರು ಪ್ರತಿ ವರ್ಷ ಒಂದೇ ಬೆಳೆ ಬದಲಾಗಿ ಬೆಳೆ ಪರಿವರ್ತನಾ ಪದ್ಧತಿ ಅನುಸರಿಸುವುದರಿಂದ ರೋಗಬಾಧೆ ತಡೆಗಟ್ಟುವುದರ ಜತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸಿ, ರೋಗಮುಕ್ತ ಮತ್ತು ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಹೇಳಿದರು.
ತಾಲೂಕಿನ ಯಳವತ್ತಿ, ಗೊಜನೂರ, ಲಕ್ಷೆ್ಮೕಶ್ವರ ಭಾಗದಲ್ಲಿ ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಆರಂಭಿಸಿದ ಹಿಂಗಾರಿನ ಬೆಳೆಗಳ ಕ್ಷಿಪ್ರ ಸಂಚಾರ ಸಮೀಕ್ಷೆ ವೇಳೆ ಅವರು ಮಾತನಾಡಿದರು.
ಮಣ್ಣಿನಲ್ಲಿ ಸೇರಿಕೊಂಡಿರುವ ಶಿಲೀಂಧ್ರಗಳಿಂದ ಉಂಟಾಗುವ ಬೆಳೆ ಸೊರಗು ರೋಗಬಾಧೆ ನಿಯಂತ್ರಣ ಕಷ್ಟಸಾಧ್ಯ. ಅದಕ್ಕಾಗಿ ರೈತರು ಮಾಗಿ ಉಳುಮೆ, ಮಣ್ಣು ಪರೀಕ್ಷೆ, ಬೀಜೋಪಚಾರ, ಬೆಳೆ ಬದಲಾವಣೆಯಂಥ ಕ್ರಮಗಳನ್ನು ಅನುಸರಿಸಬೇಕು ಎಂದರು.
ಲಕ್ಷ್ಮೇಶ್ವರದಲ್ಲಿ ರೈತ ಕೆಂಚನಗೌಡ ಪಾಟೀಲ ಅವರ ಕಡಲೆ ಬೆಳೆ ಕಾಯಿಕಟ್ಟುವ ಪೂರ್ವ(2 ತಿಂಗಳು)ದಲ್ಲಿಯೇ ಸಿಡಿ/ನೆಟೆರೋಗಕ್ಕೆ ಒಣಗಿ ಸಂಪೂರ್ಣ ಬೆಳೆ ಹಾಳಾಗಿರುವುದನ್ನು ವೀಕ್ಷಣೆಗೆ ಹೋದಾಗ ಸಮಸ್ಯೆ ಹೇಳಿಕೊಂಡ ರೈತರು, ಬಿತ್ತನೆ ಪೂರ್ವಲ್ಲಿಯೇ ರೈತರಿಗೆ ತಿಳಿವಳಿಕೆ ಮೂಡಿಸಬೇಕು. ಈ ವರ್ಷ ಬೀಜೋಪಚಾರ ಸೇರಿ ಮುಂಜಾಗ್ರತೆ ಕ್ರಮದಿಂದ ಬಿತ್ತನೆ ಮಾಡಿದರೂ ಅಕಾಲಿಕ ಮಳೆ, ಫೆಂಗಲ್ ಚಂಡಮಾರುತದಿಂದ ಬಹುತೇಕ ರೈತರ ಕಡಲೆ ಬೆಳೆ ರೋಗಕ್ಕೆ ತುತ್ತಾಗಿದೆ. ಆದ್ದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿಗಳು ಎನ್ಡಿಆರ್ಎಫ್/ಎಸ್ಡಿಆರ್ಎಫ್ ಯೋಜನೆಯಡಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಮಾತ್ರ ಪರಿಹಾರ ಕಲ್ಪಿಸಬಹುದಾಗಿದೆ. ತಾಲೂಕಿನ ಅನೇಕ ಕಡೆ ಮಾತ್ರ ಹೆಚ್ಚು ಪ್ರಮಾಣದಲ್ಲಿ ಕಡಲೆಗೆ ನೆಟೆ/ಸಿಡಿ ರೋಗ ಆವರಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಗದಗ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಸ್ಯ ಕೀಟ ಶಾಸ್ತ್ರಜ್ಞ ಡಾ.ಸಿ.ಎಂ. ರಫಿ ಮಾತನಾಡಿ, ಕಡಲೆ ಬೆಳೆ ಗದಗ ಜಿಲ್ಲೆಯ ಹಿಂಗಾರಿನ ಸಾಂಪ್ರದಾಯಿಕ ಬೆಳೆಯಾಗಿದೆ. ಅನೇಕ ರೈತರು ಪ್ರತಿವರ್ಷ ಹಿಂಗಾರಿನಲ್ಲಿ ಕಡಲೆಯನ್ನೇ ಪ್ರಮುಖವಾಗಿ ಬೆಳೆಯುತ್ತಾರೆ. ಬೆಳೆ ಬದಲಾವಣೆಯಾಗದ್ದರಿಂದ ಮಣ್ಣಿನಲ್ಲಿ ಸೇರಿಕೊಂಡಿರುವ ಶಿಲೀಂಧ್ರ ್ರಾಶಕಗಳು ಮತ್ತು ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಮತ್ತು ಹವಾಮಾನ ವೈಪರಿತ್ಯದಿಂದ ಬೆಳೆ ಒಣಗಳು ಪೂರಕ ವಾತಾವರಣ ಸೃಷ್ಟಿಯಾದಂತಾಗಿದೆ. 3 ರಿಂದ 5 ವರ್ಷ ಬೆಳೆ ಪರಿವರ್ತನೆ ಮಾಡಬೇಕು. ಹಿಂಗಾರಿನಲ್ಲಿ ಜೋಳ, ಗೋದಿ, ಕುಸುಬೆ, ಹೊಸ ತಳಿಯ ಕಡಲೆಯನ್ನು ಬೀಜೋಪಚಾರದಂಥ ಮುಂಜಾಗ್ರತೆ ಕ್ರಮದೊಂದಿಗೆ ಬಿತ್ತನೆ ಮಾಡಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಯ್ಯ ಕೊರವನವರ, ಪ್ರಾಣೇಶ, ರೇವಣಪ್ಪ ಮನಗೂಳಿ, ಮೇಘನಾ ನಾಡಿಗೇರ, ಅಣ್ಣಿಗೇರಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ತಳಿ ಶಾಸ್ತ್ರಜ್ಞ ಡಾ. ಮೋಟಗಿ, ಅಣ್ಣಿಗೇರಿ ಕೃಷಿ ಸಂಶೋಧನಾ ಕೇಂದ್ರದ ಬೇಸಾಯ ಶಾಸ್ತ್ರಜ್ಞ ಡಾ.ಸಂಗಶೆಟ್ಟಿ ಬಾಲಕುಂದೆ, ಸಸ್ಯ ರೋಗ ಶಾಸ್ತ್ರಜ್ಞ ಡಾ.ಶಿವಲಿಂಗಪ್ಪ ಹೋಟ್ಕರ, ಪಿ.ಕೆ. ಹೊನ್ನಪ್ಪನವರ, ವಿರೂಪಾಕ್ಷ ಆದಿ ಪಾಲ್ಗೊಂಡಿದ್ದರು.