

ಮೈಸೂರು: ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ..’ ಬಸವಣ್ಣ ಅವರ ವಚನದ ಈ ಏಳು ಬೇಡಗಳನ್ನು ನಾವು ಪಾಲಿಸಿದರೆ ನಮಗೆ ಯಾವ ಕೋರ್ಟೂ ಬೇಡ, ಪೊಲೀಸ್ ಠಾಣೆಯೂ ಬೇಡ ಎಂದು ಆಂಧ್ರಪ್ರದೇಶ ರಾಜ್ಯಪಾಲ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ, ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ಬುಧವಾರ ಆಸ್ಪತ್ರೆಯ ಆವರಣದಲ್ಲಿ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿ, ದೇವರನ್ನು ಮೆಚ್ಚಿಸಲು ಯಾವ ದೇವಸ್ಥಾನಗಳು ಬೇಕಾಗಿಲ್ಲ, ಬಸವಣ್ಣ ಅವರ ವಚನದ 7 ಬೇಡಗಳನ್ನು ಪಾಲಿಸಿದರೆ ಸಾಕು ಎಂದು ಹೇಳಿದರು.
ಅಜ್ಞಾನವು ಅನೇಕ ಸಾಮಾಜಿಕ ಅನಿಷ್ಟಗಳಿಗೆ ಕಾರಣವಾಗುತ್ತಿದ್ದು, ಜ್ಞಾನವೇ ಇದಕ್ಕೆಲ್ಲ ಮದ್ದಾಗಿದೆ. ಈ ಹಿನ್ನೆಲೆಯಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಜೆಎಸ್‌ಎಸ್ ಮಹಾವಿದ್ಯಾಪೀಠ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಜೆಎಸ್‌ಎಸ್ ಮಹಾವಿದ್ಯಾಪೀಠ 300ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ದೇಶ, ವಿದೇಶದಲ್ಲಿ ಪ್ರಾರಂಭಿಸಿದೆ. ಸುತ್ತೂರು ಮಠದಲ್ಲಿ 4 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಸಮಾಜ ಸುಧಾರಣೆಗೆ ಸುತ್ತೂರು ಮಠ ಅನನ್ಯವಾದ ಕೊಡುಗೆ ನೀಡುತ್ತಿದೆ. ಪುಣ್ಯ ಕ್ಷೇತ್ರ, ಮಠಗಳು ಇಲ್ಲದೆ ಹೋಗಿದ್ದರೆ ನಾವು ಯಾವ ಕಡೆ ಸಾಗುತ್ತಿದ್ದವೋ ತಿಳಿಯದು. ನಮಗೆ ಮಠಗಳು ದಾರಿ ದೀಪವನ್ನು ತೋರಿಸುತ್ತಿದೆ. ಸುತ್ತೂರು ಮಠವು ಕಾಯಕವೇ ಕೈಲಾಸ ಮಾದರಿಯಲ್ಲಿ ನಿಸ್ವಾರ್ಥ ಮನೋಭಾವದೊಂದಿಗೆ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಬೇಕಾದರೆ ದೊಡ್ಡ ಆಲೋಚನೆ ಮಾಡಬೇಕು. ನೀವು ದೊಡ್ಡದಾಗಿ ಆಲೋಚನೆ ಮಾಡಲು ಪ್ರಾರಂಭಿಸಿದಾಗ ಮಾತ್ರ ಸಾಧನೆಯ ಹಾದಿಯಲ್ಲಿ ಸಾಗಲು ಸಾಧ್ಯ. ನಿಮ್ಮ ಆಲೋಚನೆಯೇ ನಿಮ್ಮನ್ನು ದೊಡ್ಡವರನ್ನಾಗಿ ಮಾಡಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ದೇಶದಲ್ಲಿ ಮಠಮಾನ್ಯಗಳು ಇಲ್ಲದೆ ಹೋಗಿದ್ದರೆ ದೇಶ ಎಷ್ಟೋ ಹಿಂದೆ ಉಳಿಯುತಿತ್ತು. ಸಮಾಜ ಸುಧಾರಣೆಗೆ ಮಠಗಳ ಕೊಡುಗೆ ಅಪಾರವಾದದ್ದು. ಸಮಾಜ ಸುಧಾರಣೆಗೆ ಸಮಾಜಕ್ಕೆ ಚಿಕಿತ್ಸೆ ನೀಡುವ ಕಾರ್ಯವನ್ನು ಮಠಗಳು ಮಾಡುತ್ತಿವೆ ಎಂದರು.
ಸುಪ್ರೀಂಕೋಟ್ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ನೀಡಿದ ಮಹತ್ವದ ತೀರ್ಪುಗಳು ದೇಶಕ್ಕೆ ಮಾದರಿಯಾಗಿವೆ. ಅವರು ನೀಡಿದ ತೀರ್ಪುಗಳು ದೇಶವನ್ನು ಒಗ್ಗೂಡುವಂತೆ ಮಾಡಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆಂಧ್ರಪ್ರದೇಶ ರಾಜ್ಯಪಾಲ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅತ್ಯಂತ ಸಜ್ಜನ ಹಾಗೂ ಸರಳ ವ್ಯಕ್ತಿತ್ವದವರು. ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಆದರೆ, ಇದರಿಂದ ಎದೆಗುಂದದೆ ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆದರು. ದೊಡ್ಡ ಸಾಧನೆ ಮಾಡಲು ದೊಡ್ಡ ಕನಸುಗಳನ್ನು ಕಾಣಬೇಕು ಎಂಬುದಕ್ಕೆ ಅಬ್ದುಲ್ ನಜೀರ್ ಅವರೇ ಸಾಕ್ಷಿ ಎಂದರು.
ಅಬ್ದುಲ್ ನಜೀರ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಸಂದರ್ಭ ತ್ರಿವಳಿ ತಲಾಕ್, ರಾಮಮಂದಿರ ವಿವಾದ, ಆಧಾರ್ ಕಾರ್ಡ್ ಗೌಪ್ಯತೆ ವಿಚಾರ ಸೇರಿದಂತೆ ಹಲವು ವಿಚಾರಗಳಲ್ಲಿ ಮಹತ್ವದ ತೀರ್ಪು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ ಕುಲಸಚಿವ ಡಾ.ಸುರೀಂದರ್ ಸಿಂಗ್ ಇದ್ದರು.