

ಕಡೂರು: ಮನುಷ್ಯ ಹುಟ್ಟಿದ ದಿನದಿಂದಲೇ ಜಾನಪದ ಸಂಸ್ಕೃತಿ ಉದಯವಾಯಿತು. ಮನುಷ್ಯನ ಸರ್ವತೋಮುಖ ಅಭಿವೃದ್ಧಿಯ ತಳಹದಿಯಾದ ಜಾನಪದವನ್ನು ಇಂದು ಪ್ರಪಂಚದಾದ್ಯಂತ ವಿಶ್ವ ಜಾನಪದ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ ಎಂದು ಜಾನಪದ ಸಾಹಿತಿ ಇಮ್ರಾನ್ ಅಹಮದ್ ಬೆಗ್ ತಿಳಿಸಿದರು.
ತಾಲೂಕಿನ ಚಿಕ್ಕನಲ್ಲೂರು ಗ್ರಾಮದ ಶ್ರೀಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಾನಪದ ಪರಿಷತ್ ತಾಲೂಕು ಘಟಕದಿಂದ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಆಚಾರ ವಿಚಾರ,ಉಡುಗೆ ತೊಡುಗೆ, ಆಹಾರ ಪದ್ಧತಿ, ಕರುಳು ಸಂಬಂಧ, ಪೂಜೆ ಪುನಸ್ಕಾರ, ಹಬ್ಬ ಹರಿದಿನ, ಧಾರ್ಮಿಕ ವಿಧಿ ವಿಧಾನಗಳು ಜಾನಪದ ಸಂಸ್ಕೃತಿಯಿಂದ ಪ್ರಭಾವಿತಗೊಂಡಿವೆ. ಭಾರತೀಯ ಸಂಗೀತ, ಸಾಹಿತ್ಯ ಕಲಾ ಪ್ರಕಾರಗಳ ಮೂಲ ಬೇರುಗಳು ಸಹ ಜಾನಪದದಿಂದಲೇ ಹುಟ್ಟಿವೆ ಎಂದರು.
ಇಂದಿನ ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ ಕಲೆ ರಾಜಕೀಯ, ಶಿಲ್ಪ ಕಲೆ, ಇವುಗಳು ಸಹ ಜಾನಪದರ ದೊಡ್ಡ ಕೊಡುಗೆಯಾಗಿವೆ. ಜಾನಪದ ಸಾಹಿತ್ಯ ಸಂಗೀತ, ಸಂಸ್ಕೃತಿ ಕಲೆ ಇವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.
ತಾಲೂಕು ಅಧ್ಯಕ್ಷ ಜಗದೀಶ್ವರ ಆಚಾರ್, ಕಲಾವಿದ ಚಿಕ್ಕನಲ್ಲೂರು ಜಯಣ್ಣ , ಸಾಹಿತಿ ನವೀನ್ ಪೆನ್ನಯ್ಯ, ಸಾಹಿತಿ ಬಿ.ರಾಜಪ್ಪ, ಜಯಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕ್ಷೇತ್ರಪಾಲ್, ನಿವೃತ್ತ ಶಿಕ್ಷಕ ಸಿ.ಕೆ.ಸ್ವಾಮಿ, ಪರಮೇಶ್ವರಪ್ಪ, ತಿಪ್ಪೇಶ್, ಭುವನೇಶ್ವರಿ ಸಂಘದ ಪದಾಧಿಕಾರಿಗಳು ಇದ್ದರು.