

ಮೈಸೂರು: ಜಾನಪದದ ಮೂಲ ಸೊಗಡು ಉಳಿಸಲು ಯುವಜನರು ಶ್ರಮಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೈಸೂರು ಗುರುರಾಜ್ ಕರೆ ನೀಡಿದರು.
ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಗುರುವಾರ ಆಯೋಜಿಸಿದ್ದ ನಾಟಕ ಆಧಾರಿತ ರಂಗಭೂಮಿ ಮತ್ತು ಜನಪದ ಕಲಾಪ್ರಕಾರಗಳ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೆಲವು ಗಾಯಕರು ಜನಪದ ಹಾಡುಗಳ ಅರ್ಥ ತಿಳಿಯದೆ ತಪ್ಪಾಗಿ ಹಾಡುತ್ತಿದ್ದು, ಅದನ್ನು ಯುವಜನರು ಅನುಸರಿಸುತ್ತಿದ್ದಾರೆ. ಹಾಗಾಗಿ ಯುವಜನರು ಮೊಬೈಲ್‌ನಲ್ಲಿ ಬರುವ ಜನಪದ ಗೀತೆಗಳನ್ನು ಅನುಸರಿಸದೆ ಜನಪದ ಗಾಯಕರ ಬಳಿ ಗಾಯನವನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಸಮಾರಂಭ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ನಮ್ಮೊಳಗಿರುವ ಕಲಾವಿದನನ್ನು ಜಾಗೃತಗೊಳಿಸುವ ಶಕ್ತಿ ಕಲೆಗೆ ಇದೆ. ಯುವಜನರು ಮೊಬೈಲ್ ಗೀಳಿಗೆ ಬೀಳದೆ ಕಲಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಎಂಎಂಕೆ ಮತ್ತು ಎಸ್‌ಡಿಎಂ ಕಾಲೇಜು ಸಹ ಪ್ರಾಧ್ಯಾಪಕಿ ಡಾ.ವಿನೋದಾ, ಜನಪದ ಗಾಯಕ ಮೈಸೂರು ಮಹಾಲಿಂಗ, ಮಹಾರಾಣಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಅಶ್ವಿನಿ, ಗೌತಮ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇದ್ದರು.