

ಮೈಸೂರು: ಅರಮನೆ ಅಂಗಳದಲ್ಲಿ ಯುಗಾದಿ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಉತ್ಸವದಲ್ಲಿ ಮಂಗಳವಾರ ಜಾನಪದ ವೈಭವ ಝೇಂಕರಿಸಿತು. ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದಿಂದ ಡಾ.ಕಾ.ರಾಮೇಶ್ವರಪ್ಪ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಿದ ‘ಜಾನಪದವೇ ಸತ್ಯ.. ಜಾನಪದವೇ ನಿತ್ಯ’ ಕಾರ್ಯಕ್ರಮ ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು.
ಕನ್ನಡ ಜಾನಪದದ ಜಾಗತಿಕ ಹಿರಿಮೆ ಗರಿಮೆಗಳ ವಿವರಣೆಯೊಂದಿಗೆ ಅರಮನೆಯ ದೀಪದ ಬೆಳಕಿನಲ್ಲಿ ಅಲಂಕೃತವಾಗಿದ್ದ ವೇದಿಕೆಯ ಇಕ್ಕೆಲಗಳಿಂದ ಎದ್ದು ಬಂದ ಇನಿದನಿ ಕಲಾವಿದರು ಜಾನಪದದ ಜಾಗತಿಕ ಹಿರಿಮೆ, ಗರಿಮೆಗಳೊಂದಿಗೆ ಕೊಳ್ಳೆಗಾಲದ ಕುಸುರಿಯ ಸತ್ತಿಗೆ ಎತ್ತಿಕೊಂಡು ಕಂಡಾಯವನ್ನು ಹೊತ್ತುಕೊಂಡು ಮುಂಗುಂಡಾದ ಮಾದೆವನವರು ಮುಂದಲ ಪೂಜೆಗೆ ಬರುವಾಗ ಗೀತೆಗೆ ಗೆಜ್ಜೆ ಸದ್ದಿನ ಹೆಜ್ಜೆ ಹಾಕುತ್ತಾ ವೇದಿಕೆಗೆ ಬಂದಾಗ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಭಕ್ತಿ ಭಾವದಿಂದ ಮಂತ್ರಮುಗ್ಧರಾದರು.
ಇನಿದನಿ ಕಲಾವಿದರು ಧರಿಸಿದ್ದ ಗುಲಾಬಿ ಪಂಚೆ, ಬಿಳಿ ಜುಬ್ಬ, ಗುಲಾಬಿ ವಸ್ತ್ರಗಳು, ಕಾಲಿಗೆ ಕಟ್ಟಿದ್ದ ಗೆಜ್ಜೆ, ಧರಿಸಿದ್ದ ಆಭರಣಗಳಿಂದಾಗಿ ವೇದಿಕೆಯು ನಮ್ಮ ಹಳ್ಳಿಗಳಲ್ಲಿ ನಡೆಯುವ ದೇವರ ಪರುಷೆಯಂತೆ ಕಂಗೊಳಿಸಿತು. ವಿಶ್ವದ ಜಾನಪದದಲ್ಲಿ ಕನ್ನಡ ಜಾನಪದದ ಮಹಾಕಾವ್ಯಗಳಿಗಿರುವ ಮಹತ್ವ ಡಾ.ಕಾ.ರಾಮೇಶ್ವರಪ್ಪ ಅವರು ಮನೋಜ್ಞವಾಗಿ ವಿವರಿಸಿದರು. ಅದರಲ್ಲೂ ಮಲೈ ಮಹದೇಶ್ವರರು ಮತ್ತು ಧರೆಗೆ ದೊಡ್ಡವರ ಮಹಾ ಕಾವ್ಯಗಳು ವಿಶ್ವದ ಅತಿ ದೊಡ್ಡ ಜಾನಪದ ಮಹಾ ಕಾವ್ಯಗಳ ಸಾಲಿಗೆ ಸೇರಿರುವುದು ಕನ್ನಡಿಗರ ಹೆಗ್ಗಳಿಕೆ ಎಂದು ಬಣ್ಣಿಸಿ, ಪೂರ್ವಿಕರಿಗೆ ನಮನಗಳನ್ನು ಸಲ್ಲಿಸಿದರು.
ಜನಮಾನಸದಲ್ಲಿ ಪ್ರಸಿದ್ಧವಾಗಿರುವ ಮಾದೇಶ್ವರರ ವೈಭವ ವರ್ಣಿಸುವ ಮಲ್ಲಿಗೆ ಹೂವಾಗಿ ಚೆಲ್ಲೀತು ನಿನ್ನ ಪರುಷೆ ಚೆಲ್ಲಾಟಗಾರ ಮಾದಪ್ಪ, ನಮ್ಮ ರೈತರ ದೈನಂದಿನ ಬದುಕಿನ ಆರಂಭವನ್ನು ಬಣ್ಣಿಸುವ ಬೆಳಗುವ ಬೆಳ್ಳಿಯ ಚುಕ್ಕೆಯು ಮೂಡಿತು ಬೆಳಗಾಯಿತು ನೋಡು, ಶಿವನು ತನ್ನ ಭಕ್ತರನ್ನು ಪರೀಕ್ಷಿಸುವ ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ ತಂಗಿ...ಇವನಂಥ ಚೆಲ್ವರಿಲ್ಲ ನೋಡು ಬಾರೆ ಗಾಯನ ಮೋಡಿ ಮಾಡಿತು.
ಅಲ್ಲದೆ ಚಿತ್ರದುರ್ಗದ ಚಂದ್ರವಳ್ಳಿ ತೋಟದಲ್ಲಿ ಪ್ರೇಮಿಗಳ ಪಿಸುಮಾತು ವರ್ಣಿಸುವ ಚಂದ್ರವಳ್ಳಿ ತೋಟದಲ್ಲಿ ಕಾಯಿ ಸೊಪ್ಪು ಕೊಯ್ಯಳ್ಯಾರೇ...ಕೂಗಿದ್ರೇಕೆ ಮಾತನಾಡೊಲ್ಲೇ..... ನಂಜನಗೂಡು ನಂಜುಂಡೇಶ್ವರನ ವೈಭವ ವರ್ಣಿಸುವ ತಿಂಗಾ ತಿಂಗಳಿಗೂ ಚೆಂದ ನಂಜನಗೂಡು...ಗಂಧಾ ತುಂಬೈತೆ ಗುಡಿಗೆಲ್ಲಾ, ಚೆಲ್ಲಿದರು ಮಲ್ಲಿಗೆಯ ಬಾಣಸೂರೇರಿ ಮ್ಯಾಲೆ ಸೇರಿದಂತೆ ಮುಂತಾದ ಜನಪ್ರಿಯ ಗೀತೆಗಳು ಜಾನಪದ ವೈಭವ ಅನಾವರಣಗೊಳಿಸಿವು.
ಡಾ. ಕಾ. ರಾಮೇಶ್ವರಪ್ಪ ಅವರಿಗೆ ರಶ್ಮಿ, ಬಿ.ಬಸವರಾಜ್, ನಟರಾಜ್ ಹರದನಹಳ್ಳಿ, ರವಿರಾಜ್ ಹಾಸು, ಅರುಣ್, ಕಿಶೋರ್, ಸ್ಪಂದನ ರಾಮೇಶ್ವರ್, ಮಾನಸ, ಉಮೇಶ, ವಿಕಾಸ್ ಸಾಥ್ ನೀಡಿದರು.
ಕೀ ಬೋರ್ಡ್‌ನಲ್ಲಿ ಪುರುಷೋತ್ತಮ್, ಕೊಳಲು ಗಣೇಶ್, ತಬಲಾ ಮಹದೇವ್, ಆಲನಹಳ್ಳಿ ರವಿ. ರಿದಂ ಅರುಣ್ ಸಹಕಾರ ನೀಡಿದರು.