

ಎನ್.ಆರ್.ಪುರ: ಕನ್ನಡ ಸಾಹಿತ್ಯದಲ್ಲಿ ಜಾನಪದ ಸಾಹಿತ್ಯ ಅತ್ಯಂತ ಪ್ರಾಚೀನ ಸಾಹಿತ್ಯ ಪ್ರಾಕಾರಗಳಲ್ಲಿ ಒಂದಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷ್‌ತ್ ಏರ್ಪಡಿಸಿದ್ದ ಜಾನಪದ ಸಾಹಿತ್ಯದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಬಾಯಿಂದ ಬಾಯಿಗೆ ಹರಡುವ ಮಾತುಗಳೇ ಜಾನಪದ ಸಾಹಿತ್ಯ. ಇತ್ತೀಚಿನ ವರ್ಷಗಳಲ್ಲಿ ಯುವ ಪೀಳಿಗೆಯವರು ಜಾನಪದ ಸಾಹಿತ್ಯದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಜಾನಪದ ಸಾಹಿತ್ಯದಲ್ಲಿ ಬರುವ ಒಗಟು, ಗಾದೆ, ರಾಗಿ ಬೀಸುವ ಹಾಡು, ಸೋಬಾನೆ ಹಾಡು, ಕೋಲಾಟ ಮುಂತಾದ ಜಾನಪದ ಪ್ರಕಾರಗಳನ್ನು ಜೀವಂತವಾಗಿ ಇಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಶ್ರಾವಣ ಮಾಸದಲ್ಲಿ ಕಸಾಪದಿಂದ ಮಕ್ಕಳಿಗೆ ರಸ ಪ್ರಶ್ನೆ ಮೂಲಕ ಜ್ಞಾನದ ಭಂಡಾರ ಬಿತ್ತುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ 8 ಮಕ್ಕಳಿಗೆ ಕಾಲೇಜು ಕಣ್ಮಣಿಗಳು ಎಂಬ ಬಿರುದು, ಪುಸ್ತಕ ನೀಡಿ ಗೌರವಿಸಲಾಯಿತು. ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಕಸಾಪ ಹೋಬಳಿ ಅಧ್ಯಕ್ಷ ಉದಯ ಗಿಲ್ಲಿ, ಸತ್ಯಪ್ರಸಾದ್, ಅಜಂತ ಉಪನ್ಯಾಸಕಿ ಸವಿತ ಇದ್ದರು.