

ಶಿರಹಟ್ಟಿ: ಜನಪದ ಸಾಹಿತ್ಯ, ನೃತ್ಯ, ಸಂಗೀತ, ಭಾಷೆ ಮತ್ತು ಹಳ್ಳಿಗುಡಿಯ ಬದುಕು ನಮ್ಮ ಸಂಸ್ಕೃತಿಯ ಮೂಲ ಹೆಜ್ಜೆ ಗುರುತುಗಳಾಗಿವೆ. ಇಂತಹ ಉತ್ಸವಗಳು ಜನಪದ ಪರಂಪರೆಯ ಅರಿವು ಮೂಡಿಸುತ್ತವೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಸ್.ಆರ್. ಶಿರಹಟ್ಟಿ ಹೇಳಿದರು.
ಪಟ್ಟಣದ ಶ್ರೀ.ಜ ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದ ಅವರು, ಜನಪದ ಉತ್ಸವವುಹಳ್ಳಿಯ ಜೀವನ ಶೈಲಿ, ಕಲೆ ಮತ್ತು ಪರಂಪರೆಯ ಪ್ರಾಮುಖ್ಯವನ್ನು ಮನನ ಮಾಡಿಸುವ ಪ್ರಮುಖ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಜನಪದ ಕಲಾವಿದ ಸಾಂಬಯ್ಯ ಹಿರೇಮಠ ಮಾತನಾಡಿ, ಪೂರ್ವಜರು ನಿಸರ್ಗವನ್ನು ನಂಬಿ, ಅದಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿದ್ದರು. ಅವರ ಜೀವನ ಶೈಲಿ ಪ್ರಾಕೃತಿಕ ಮತ್ತು ಆರೋಗ್ಯಕರವಾಗಿತ್ತು. ಯುವ ಪೀಳಿಗೆಗೆ ಆ ಸಂಸ್ಕೃತಿಯ ಮಹತ್ವ ತಿಳಿಸುವ ಉತ್ಸವಗಳು ಅತಿ ಮುಖ್ಯ ಎಂದರು.
ಪ್ರಾಂಶುಪಾಲ ಡಾ. ಉಮೇಶ ಅರಹುಣಸಿ ಅಧ್ಯಕ್ಷತೆ ವಹಿಸಿದ್ದರು. ಶೀಲಾ ಹಳ್ಳೆಮ್ಮನವರ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು. ಫಕೀರವ್ವ ಜಮಗಿ ಸ್ವಾಗತಿಸಿದರು. ಡಾ. ಶಂಕರ ಬಾರಿಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜು ತಳವಾರ ವಂದಿಸಿದರು. ಸೌಮ್ಯಾ ಅಂದಾನಶೆಟ್ಟರ ಮತ್ತು ಜಾನಕಿ ಕದಂ ಕಾರ್ಯಕ್ರಮ ನಿರೂಪಿಸಿದರು. ಪವನ, ಫಕೀರೇಶ, ಪಾರ್ವತಿ, ರಕ್ಷಿತಾ ಜನಪದ ಗೀತೆಗಳ ಮೂಲಕ ಹಳ್ಳಿಗುಡಿಯ ಸಂಸ್ಕೃತಿಯ ರಸದೌತಣ ನೀಡಿದರು. ಪ್ರಿಯ ಮತ್ತು ತಂಡ ಜನಪದ ನೃತ್ಯ ಪ್ರದರ್ಶಿಸಿದರು. ಜತೆಗೆ, ಜನಪದ ಅಡುಗೆ ಹಾಗೂ ವಸ್ತು ಪ್ರದರ್ಶನವೂ ವಿಶೇಷ ಆಕರ್ಷಣೆಯಾಗಿತ್ತು.