

ರಬಕವಿ/ಬನಹಟ್ಟಿ: ಜನಪದರ ಸಾಹಿತ್ಯ, ಸಂಗೀತ, ನೃತ್ಯ, ಆಟ ಈ ಎಲ್ಲವನ್ನು ಒಳಗೊಂಡಿದ್ದೇ ಜಾನಪದ. ಮನುಷ್ಯನ ಬದುಕಿನೊಂದಿಗೆ ಜಾನಪದ ಅವಿನಾಭಾವ ಸಂಬಂಧ ಹೊಂದಿದೆ ಎಂದು ಹಿರಿಯ ಸಾಹಿತಿ ಡಾ. ಬಿ. ಆರ್. ಪೊಲೀಸ್ ಪಾಟೀಲ ಹೇಳಿದರು.
ರಬಕವಿ ಶಿವದಾಶಿಯಮಯ್ಯ ಸಮುದಾಯ ಭವನದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯ ಹಾಗೂ ಜಿಲ್ಲಾಮಟ್ಟದ ಘಟಕದಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಘಟಕದ ಉದ್ಘಾಟನೆ, ಪದಗ್ರಹಣ ಹಾಗೂ ಜಾನಪದ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾವ ತುಂಬಿ ತಿಣುಕದೆ ಹೆರಿಗೆಯಾಗುವುದೇ ಜನಪದ ಎಂದು ಹೇಳಿದರೆ ತಪ್ಪಾಗಲಾರದು ಎಂದರು. ಬಳಿಕ ತಾವು ರಚಿಸಿದ ಅನೇಕ ಹಂತಿಪದಗಳು, ಜನಪದ ಶೈಲಿಯ ಹಳ್ಳಿ ಸೊಗಡಿನ ಪದಗಳನ್ನು ಹಾಡಿ ರಂಜಿಸಿದರು.
ರಾಜ್ಯ ಕಜಾಪ ಅಧ್ಯಕ್ಷ ಡಾ. ಎಸ್. ಬಾಲಾಜಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಪಾಶ್ಚಾತ್ಯ ದೇಶಗಳಲ್ಲಿ ಜಾನಪದ ಸಂಗ್ರಹ ಹಾಗೂ ಅಧ್ಯಯನಗಳ ಬಗ್ಗೆ 19ನೇ ಶತಮಾನದಲ್ಲಿ ವಿಶೇಷ ಆಸಕ್ತಿ ಮೂಡಿಸಿ ಆ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಅಲ್ಲಿಯ ವಿದ್ವಾಂಸರು ಮೆರೆದರು ಎಂದು ತಿಳಿಸಿದರು.
ಸಾಹಿತಿ ಸಿದ್ದರಾಜ ಪೂಜಾರಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನವೋದಯ ಕ್ರಾಂತಿಯ ಜೊತೆಯಲ್ಲಿಯೇ ಜಾನಪದ ನವೋದಯವೂ ಆಯಿತು. 1925ಕ್ಕೂ ಮುಂಚೆಯೇ ಪ್ರಕಟವಾದ ಮಾಸ್ತಿ ವೆಂಕಟೇಶ ಅಯ್ಯಂಗಾರರ ಲೇಖನ ‘ಕನ್ನಡ ಲಾವಣಿ ಸಾಂಗತ್ಯ’ ಎಂಬುದು ಕನ್ನಡ ಜನಪದ ಸಾಹಿತ್ಯದ ವಿವಿಧ ಮುಖಗಳನ್ನು ಪರಿಚಯ ಮಾಡಿಕೊಟ್ಟು, ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸಂಗ್ರಹ ಕಾರ್ಯಕ್ಕೆ ಒಂದು ರೀತಿಯ ಪ್ರೇರಣೆ ನೀಡಿತು ಎಂದು ತಿಳಿಸಿದರು.
ಇದಕ್ಕೂ ಮುನ್ನ ಅನೇಕ ಜಾನಪದ ನೃತ್ಯಗಳು, ಹಳ್ಳಿಸೊಗಡು ಬಿಂಬಿಸುವ ಅನೇಕ ದೃಶ್ಯಗಳ ನೃತ್ಯಗಳು ನಡೆದವು. ತಾಲೂಕು ಘಟದಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಆರ್. ವಿ. ಗೌಡರ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪ್ರಕಾಶ ಸಣಕಾಲ, ಚಿದಾನಂದ ಸೊಲ್ಲಾಪುರ, ಜಿಲ್ಲಾ ಕಜಾಪ ಅಧ್ಯಕ್ಷ ಡಿ.ಎಂ. ಸಾವುಕಾರ, ವಿಶ್ವಜ ಕಾಡದೇವರ, ರಾಜ್ಯ ಕಾರ್ಯದರ್ಶಿಯಾದ ಕೆ. ಎಸ್. ಕೌಜಲಗಿ, ಜಿಲ್ಲಾ ಕಾರ್ಯದರ್ಶಿ ಆರ್. ಬಿ. ನಾಟಿಕಾರ, ಜಿಲ್ಲಾ ಕಜಾಂಚಿ ಸುರೇಶ ವಸದ ಇತರರಿದ್ದರು.
ತಾಲೂಕಿನ ಎಲ್ಲ ನೂತನ ಪದಾಧಿಕಾರಿಗಳು, ಅನೇಕ ಮಹಿಳಾ ಸಂಘಟನೆಗಳು, ವಾದ್ಯಮೇಳಗಳು, ಮಹಿಳೆಯರು, ಶಿಕ್ಷಕರು ಹಾಗೂ ಹಿರಿಯರನ್ನು ಸನ್ಮಾನಿಸಲಾಯಿತು.