

ಕೊಳ್ಳೇಗಾಲ: ಜಾನಪದ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜೋಸೆಫ್ ಅಲೆಗ್ಸಾಂಡರ್ ಸಲಹೆ ನೀಡಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಸೋಮವಾರ ಜಾನವಿ ಜಾನಪದ ಕಲಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಜಾನಪದ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾನಪದ ಕಲೆ ಈ ನೆಲದ ಅಸ್ಮಿತೆಯಾಗಿದೆ. ಸಹಸ್ರಾರು ವರ್ಷದ ಇತಿಹಾಸ ಜಾನಪದಕ್ಕಿದೆ. ಬಾಯಿಂದ ಬಾಯಿಗೆ ಬಂದು ಬೆಳೆದ ಈ ಕಲೆ ಗಟ್ಟಿಯಾಗಿ ಬೇರೂರಿದೆ. ಪರಂಪರೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಸಲು ಜಾನಪದ ಸಹಕಾರಿಯಾಗಿದೆ ಎಂದರು.
ಪ್ರತಿಯೊಬ್ಬರೂ ಕಲಾ ಪೋಷಕರಾಗಬೇಕು. ಮಕ್ಕಳಿಗೆ ಜಾನಪದ ಕಲೆಯ ಮಹತ್ವ ತಿಳಿಸಬೇಕು. ಕಲಿಯುವ ಅವಕಾಶವನ್ನು ಸದ್ವಿವಿನಿಯೋಗ ಮಾಡಿಕೊಂಡು ಸಾಧನೆ ಮಾಡಬೇಕು ಎಂದರು.
ಜಾನಪದಕ್ಕೆ ಎಲ್ಲರನ್ನು ಸೆಳೆಯುವ ಗುಣವಿದೆ ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ದೇವಲೋಕದವರು ಭೂಲೋಕದ ಸಂಗೀತವನ್ನು ಬಗ್ಗಿ ನೋಡುತ್ತಿದ್ದರು ಎಂಬ ಮಾತಿದೆ. ಆದ್ದರಿಂದ ಜನಪದವನ್ನು ಮುಂದಿನ ತಲೆಮಾರಿಗೂ ಉಳಿಸಬೇಕು. ಅವರಿಂದಲೇ ಬೆಳೆಸುವಂತಹ ನಿಟ್ಟಿನಲ್ಲಿ ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ತಾಲೂಕು ಉಪಖಜಾನೆ ಸಹಾಯಕ ನಿರ್ದೇಶಕಿ ಪಿ.ನಾಗರತ್ನಮ್ಮ ಮಾತನಾಡಿ, ಜನಪದ ನೆಲೆಗಟ್ಟುಗಳ ಪರಿಚಯವಾದರೆ ಆ ಕಾಲಕ್ಕೆ ಸಾಮಾಜಿಕ ಸುಧಾರಕರಾದ ಶ್ರೀ ಮಂಟೇಸ್ವಾಮಿ, ಮಹದೇಶ್ವರ ಇನ್ನಿತರ ಸಂತರ ಪರಿಚಯ ಎಲ್ಲರಿಗೂ ಆಗುತ್ತದೆ ಎಂದರು.
ರೈಲ್ವೆ ಇಲಾಖೆ ನಿವೃತ್ತ ಅಧಿಕಾರಿ ಜೆ.ನಿಂಗರಾಜು ಮಾತನಾಡಿ, ಕಲಾವಿದರ ಬದುಕು ಮತ್ತೊಬ್ಬರಿಗೆ ಮಾದರಿಯಾಗಬೇಕು. ಅದಕ್ಕಾಗಿ ಇಂತಹ ವೇದಿಕೆಗಳು ಅತ್ಯಗತ್ಯ ಎಂದರು. ಈ ವೇಳೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಪರಾಜು, ಗ್ರಾಪಂ ಸದಸ್ಯ ಮುರಳೀಧರ್, ಮಾಜಿ ಸದಸ್ಯ ನಿಂಗರಾಜು, ಜಾನವಿ ಜಾನಪದ ಕಲಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಕೈಲಾಸ ಮೂರ್ತಿ, ಪದಾಧಿಕಾರಿಗಳಾದ ಎಂ.ಜೆ.ರೇಖಾ, ಮರಿಸ್ವಾಮಿ, ಚೇತನ್, ಗೋಪಾಲ, ಮಹೇಶ್ವರಿ ಇತರರಿದ್ದರು.