ಗ್ರಾಮೀಣ ಸೊಗಡಿನ ಅರಿವು ಮೂಡಿಸಿದ ಜನಪದ ಉತ್ಸವ

sdp Janapad ustav
Published on

ಸಿದ್ದಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ತ್ಯಾರ್ಸಿಯಲ್ಲಿ ನಡೆದ ಜನಪದ ಉತ್ಸವ ಹಾಗೂ ಸಂಪ್ರದಾಯದಿನ ಪಕ್ಕಾ ಹಳ್ಳಿಯ ಸೊಗಡು ಹಾಗೂ ಜನಪದ ಕಲೆಗಳನ್ನು ಮೇಳೈಸಿದ್ದು ವಿಶೇಷವಾಗಿತ್ತು.

ಶಾಸಕ ಭೀಮಣ್ಣ ನಾಯ್ಕ ಅವರು ಸ್ವತಃ ಎತ್ತಿನಗಾಡಿ ಓಡಿಸಿ ಗ್ರಾಮೀಣ ಸೊಗಡಿನ ಮಹತ್ವದ ಅರಿವು ಮೂಡಿಸಿದರು.

ಸಿದ್ದಾಪುರ-ಕುಮಟಾ ಮಾರ್ಗದ ಕಾಲೇಜು ಬಸ್ ನಿಲ್ದಾಣದಲ್ಲಿ ಕಾಲೇಜಿನ ವಿದ್ಯಾರ್ಥಿನೀಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಪೂರ್ಣಕುಂಭ ಸ್ವಾಗತದೊಂದಿಗೆ ಶಾಸಕರನ್ನು ಬರಮಾಡಿಕೊಂಡರು.

ಕಾಲೇಜಿನಲ್ಲಿ ಶೀಗೆಹುಣ್ಣಿಮೆ, ಬಲೀಂದ್ರನ ಪ್ರತಿಷ್ಠಾಪನೆ ವಿದ್ಯಾರ್ಥಿಗಳು ತಮ್ಮ ಕೊಠಡಿಯಲ್ಲಿ ವಿವಿಧ ರೀತಿಯ ಜನಪದ ಕಲೆ ಹಾಗೂ ಹಳ್ಳಿಯ ಸೊಗಡನ್ನು ಪರಿಚಯಿಸಿದರು. ರೈತಾಪಿ ಸಮುದಾಯದ ಭೂಮಿ ಹುಣ್ಣಿಮೆ, ಬಲೀಂದ್ರನ ಪೂಜೆ, ವರಮಹಾಲಕ್ಷ್ಮೀ ಪೂಜೆ, ಶ್ರೀ ಕೃಷ್ಣ ಜನ್ಮಾಷ್ಠಮಿ ಹೀಗೆ ಅಪ್ಪಟ ದೇಶಿ ಸಂಪ್ರದಾಯವನ್ನು ಆಚರಿಸಿ ಶಾಸಕರ ಶಾಸಕರ ಗಮನ ಸೆಳೆದರು.

ನಂತರ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ ವಿದ್ಯಾರ್ಥಿಗಳು ಶ್ರದ್ಧೆಯಿಂದ ಶಿಕ್ಷಣ ಪಡೆಯಬೇಕು. ಜನಪದ ಕಲೆಗಳನ್ನು ಉಳಿಸುವಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆಯ ಪಾತ್ರ ಮುಖ್ಯವಾಗಿದೆ. ಸವಾಲನ್ನು ಸ್ವೀಕರಿಸಿ ಯಶಸ್ಸಿನ ಮೆಟ್ಟಿಲೇರಬೇಕು. ಹಿಂದಿನ ಕಲೆ ಹಾಗೂ ಸಂಪ್ರದಾಯದ ಉಳಿವಿಗೆ ಯುವಜನತೆ ಪಣ ತೊಡಬೇಕು ಎಂದರು.

ಪ್ರಾಚಾರ್ಯ ಡಾ. ಸತೀಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net