

ಕೊಳ್ಳೇಗಾಲ: ಪಟ್ಟಣದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಮತ್ತು ಜಾನಪದ ಉತ್ಸವ-2025 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಆವರಣದಲ್ಲಿ ನಮ್ಮೂರ ಹಬ್ಬ ಹಾಗೂ ವಿವಿಧ ಗ್ರಾಮೀಣ ಸಂಸ್ಕೃತಿಯ ಬಿಂಬಿಸುವ ಆಚರಣೆಗಳ ಪ್ರದರ್ಶನ ಆಯೋಜಿಸಲಾಗಿತ್ತು. ಎತ್ತಿನ ಗಾಡಿಯನ್ನು ಓಡಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.
ದೀಪಾವಳಿ, ಗಣೇಶ-ಗೌರಿ ಹಬ್ಬ, ರಾಮನವಾಮಿ, ವರಮಹಾಲಕ್ಷ್ಮೀ ಹಬ್ಬ, ಕ್ರಿಸ್‌ಮಸ್ ಆಚರಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು. ಸುಗ್ಗಿ ಸಂಕೇತವಾದ ಭತ್ತ ರಾಶಿ, ರಾಗಿ ರಾಶಿಗೆ ಪೂಜೆ ಸಲ್ಲಿಸಿದರು. ಕಾಲೇಜಿನಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗಿತ್ತು. ವಿದ್ಯಾರ್ಥಿಗಳು ಪಂಚೆ, ಶರ್ಟ್ ಹಾಗೂ ಸೀರೆ ತೊಟ್ಟು ಗಮನ ಸೆಳೆದರು. ಅಧ್ಯಾಪಕ ವೃಂದ ಹಾಗೂ ಅಧ್ಯಾಪಕೇತರ ವೃಂದವರು ದೇಸಿ ಉಡುಗೊರೆ ತೊಟ್ಟಿದ್ದರು.
ವೇದಿಕೆಯಲ್ಲಿ ಜಾನಪದ ಕಲಾವಿದ ಕಂಸಾಳೆ ಕೈಲಾಸ ಮೂರ್ತಿ ಮತ್ತು ತಂಡದವರು ಜಾನಪದ ಗೀತೆಗಳನ್ನು ಹಾಡಿದರು. ಸೋಮಶೇಖರ್ ತಂಡದವರ ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆಯಿತು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಮಂಜುನಾಥ್, ಶಾಂತರಾಜು, ಭಾಗ್ಯಾ, ನಾಮ ನಿರ್ದೇಶನ ಸದಸ್ಯರಾದ ಅನ್ಸರ್ ಬೇಗ್, ಸ್ವಾಮಿ ನಂಜಪ್ಪ, ಸರ್ಕಾರಿ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೋ.ಬಿ.ಜಯಲಕ್ಷ್ಮೀ, ಸಹಪ್ರಾಧ್ಯಾಪಕ ಸುಂದರಮೂರ್ತಿ, ಗ್ರಂಥಪಾಲಕ ಡಿ.ಮಹದೇವಯ್ಯ, ಸಹ ಪ್ರಾಧ್ಯಾಪಕ ಬಾ.ಜಿ.ಹೇಮ ಕುಮಾರ್ ಇದ್ದರು.