ನಂಜನಗೂಡು ಕಾಲೇಜಿನಲ್ಲಿ ಜಾನಪದ ಸಂಭ್ರಮ

ನಂಜನಗೂಡು ಕಾಲೇಜಿನಲ್ಲಿ ಜಾನಪದ ಸಂಭ್ರಮ
Published on

ನಂಜನಗೂಡು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗಾಗಿ ವಿವಿಧ ದೇಸಿ ಆಟಗಳ ಸ್ಪರ್ಧೆ ಆಯೋಜಿಸಲಾಗಿತ್ತು.

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಜಾನಪದ ಸಂಭ್ರಮದ ಪ್ರಯುಕ್ತ ನಡೆಸಿದ ದೇಸಿ ಆಟಗಳಾದ ಲಗೋರಿ, ಹಾವು ಏಣಿ ಆಟ, ಚೌಕಾಬಾರ, ಮಡಕೆ ಒಡೆಯುವ ಹಾಗೂ ಗಾದೆ ಹೇಳಿ ಒಗಟು ಬಿಡಿಸುವ ಸ್ಪರ್ಧೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು.

ಸಭಾ ಕಾರ್ಯಕ್ರಮವನ್ನು ಮಂಡ್ಯದ ಜಾನಪದ ಜನ್ನೆಯರು ಸಂಸ್ಥೆ ಅಧ್ಯಕ್ಷರಾದ ಡಾ. ಎಸ್.ಸಿ.ಮಂಗಳಾ ಉದ್ಘಾಟಿಸಿ ಮಾತನಾಡಿ, ಗಾದೆ ಹೇಳಿ ಒಗಟು ಬಿಡಿಸಿ ಸ್ಪರ್ಧೆಯು ಬುದ್ಧಿ ಕೌಶಲ, ಜ್ಞಾನ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಅಲ್ಲದೆ ಗಾದೆ, ಒಗಟುಗಳು ಜೀವನ ಮೌಲ್ಯವನ್ನು ಎತ್ತಿಹಿಡಿಯಲಿವೆ ಎಂದು ಅಭಿಪ್ರಾಯಪಟ್ಟರು.

ಜಾನಪದ ವಿದ್ವಾಂಸೆ ಡಾ. ಸುಜಾತಾ ಅಕ್ಕಿ ಸ್ಪರ್ಧೆಗಳ ಮಾರ್ಗಸೂಚಿಗಳನ್ನು ವಿವರಿಸಿದರು. ಪ್ರಾಂಶುಪಾಲ ಪ್ರೊ.ಬಿ.ಕೆ.ಕೆಂಪೇಗೌಡ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಮೈಸೂರಿನ ಏಕತಾರಿ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ, ಕಲಾವಿದ ದೇವಾನಂದ ವರಪ್ರಸಾದ್ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಜಾನಪದ ಸಂಭ್ರಮ-2025 ಹಾಗೂ ಈ ಕಾರ್ಯಕ್ರಮದ ಸಂಚಾಲಕರಾದ ಡಾ. ಎಂ.ಕೆಂಪಮ್ಮ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಂಶುಪಾಲ ಪ್ರೊ.ಬಿ.ಕೆ ಕೆಂಪೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net