

ವಿಜಯವಾಣಿ ಸುದ್ದಿಜಾಲ ಧಾರವಡ
ತಾಲೂಕಿನ ಇಟ್ಟಿಗಟ್ಟಿಯ ಶ್ರೀಪಾಂಡುರಂಗ ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಫೆ. 6ರಂದು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಾನಪದ ಕಲಾ ಸಂಭ್ರಮ ಸಮಾವೇಶ ಆಯೋಜಿಸಲಾಗಿದೆ.
ಫೆ. 6ರಂದು ಬೆಳಗ್ಗೆ 10.30ಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಕೊಳ್ಳಾನಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಜಾನಪದ ಅಕಾಡೆಮಿ ಸದಸ್ಯ ಡಾ. ನಿಂಗಪ್ಪ ಮುದೇನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅತಿಥಿಯಾಗಿ ಆಗಮಿಸುವರು. ಗುರುಮೂರ್ತಿ ಯರಗಂಬಳಿಮಠ ಅಧ್ಯಕ್ಷತೆ ವಹಿಸುವರು.
ಕಲಾವಿದರಾದ ಇಮಾಮಸಾಬ ವಲ್ಲೆಪ್ಪನವರ, ಡಾ. ರಾಮು ಮೂಲಗಿ, ಡಾ. ಪ್ರಭು ಹಂಚಿನಾಳ, ಚೆನ್ನಬಸಪ್ಪ ಕಾಳೆ, ಶಂಕರ ಹಲಗತ್ತಿ ಅವರನ್ನು ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ 9 ಜನರಿಗೆ ಕಲಾವಲ್ಲಭ ಪ್ರಶಸ್ತಿ ಹಾಗೂ 8 ಜನರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಾನಪದ ಕಲಾ ಸಂಭ್ರಮದಲ್ಲಿ ತತ್ವಪದ, ಸೋಬಾನ, ಬೀಸುವ ಕಲ್ಲಿನ ಪದಗಳು, ಗೀಗೀಪದಗಳು, ಕೋಲಾಟ, ಸುಡಗಾಡು ಸಿದ್ಧರ ಆಟಗಳು, ಸೇರಿ ಹಲವಾರು ಪ್ರಕಾರದ ಕಲಾವಿದರು ತಮ್ಮ ಹಾಡುಗಾರಿಕೆ ಪ್ರಸ್ತುತಪಡಿಸುವರು ಎಂದು ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭು ಕುಂದರಗಿ, ಆನಂದ ಜಾಧವ ತಿಳಿಸಿದ್ದಾರೆ.