ಮಾನವೀಯ ಸಂಬಂಧ ಗಟ್ಟಿಗೊಳಿಸುವ ಜಾನಪದ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಮಂಜುಳಾ ಅಭಿಮತ

Folk Suggi Program Mandya
Published on

ಮಂಡ್ಯ: ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಜಾನಪದ ಕಲೆಗೆ ತನ್ನದೇ ಆದ ಇತಿಹಾಸವಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಮಂಜುಳಾ ಹೇಳಿದರು.

ತಾಲೂಕಿನ ಸಂತೆಕಸಲಗೆರೆ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಶಿವಗಂಗಾ ಸಾಂಸ್ಕೃತಿಕ ಯುವಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಸತಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಜನಪದ ಸುಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಜಾನಪದ ಕಲೆಗಳಲ್ಲಿ ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಜಾನಪದ ಕಲೆಗಳು ಹಳ್ಳಿಯಲ್ಲಿ ಜೀವಂತವಾಗಿವೆ. ಯುವಕರು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಜಾನಪದ ಕಲೆಗೆ ತನ್ನದೇ ಇತಿಹಾಸವಿದ್ದು, ಅದನ್ನು ಉಳಿಸಿ ಬೆಳೆಸುವುದು ಮುಖ್ಯವಾಗಬೇಕು. ಜಾನಪದ ಅಂದರೆ ವ್ಯಕ್ತಿತ್ವ ಆದ್ದರಿಂದ ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ ಕುರಿತು ಅವರ ಜೀವನ ಚರಿತ್ರೆ, ಕಥೆಯ ಜಾನಪದವನ್ನು ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿ ಮನೆಯವರಿಗೂ ಗೊತ್ತು ಇಂತಹ ಪವಾಡ ಪುರುಷರ ಜಾನಪದವನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಜಾನಪದ ಕಲೆಯನ್ನು ದ್ವಿತೀಯ ದರ್ಜೆಯ ಕಲೆಯಾಗಿ ಪರಿಗಣಿಸುತ್ತಿರುವುದು ದುರಂತ. ಕಲೆಯ ಮೂಲವಾದ ಜಾನಪದವನ್ನು ಸಾಂಸ್ಕೃತಿಕವಾಗಿ ಸಮಾನತೆ ಕಾಣಬೇಕು ಸರ್ಕಾರಗಳು ಕಲೆ ಉಳಿವಿಗೆ ಮುಂದಾಗಬೇಕು ಎಂದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿದರು. ಶಿವಗಂಗಾ ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷ ಸಂತೆಕಸಲಗೆರೆ ಬಸವರಾಜು, ಮುಖ್ಯಶಿಕ್ಷಕ ಎಸ್.ಕೆ.ನಶೀರ್ ಹುಸೇನ್, ಪ್ರಾಂಶುಪಾಲ ಎಂ.ಸಿ.ಮಹೇಂದ್ರ, ಕಲಾವಿದ ಕೊತ್ತತ್ತಿರಾಜು ಇತರರಿದ್ದರು. ಎಸ್.ರಾಜಣ್ಣ ಮತ್ತು ತಂಡದವರಿಂದ ಸುಗಮ ಸಂಗೀತ, ಬಸವರಾಜು ಮತ್ತು ತಂಡದವರಿಂದ ಮೂಲದಾಟಿ ಜನಪದ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net