ಜಾನಪದ ಸಂಸ್ಕೃತಿಯ ತಾಯಿಬೇರು: ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಂ.ರಾಮಚಂದ್ರು ಹೇಳಿಕೆ

Folk song singing competition Mandya
Published on

ಮಂಡ್ಯ: ಜಾನಪದ ನಮ್ಮ ನೆಲಮೂಲ ಸಂಸ್ಕೃತಿಯ ತಾಯಿಬೇರು. ಅದನ್ನು ಉಳಿಸುವ ಕೆಲಸ ಆಗಬೇಕು. ಆದರೆ ಇಂದಿನ ಆಧುನಿಕ ಬದುಕಿನಲ್ಲಿ ನಾವು ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಂ.ರಾಮಚಂದ್ರು ವಿಷಾಧಿಸಿದರು.

ತಾಲೂಕಿನ ದೊಡ್ಡಗರುಡನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ಮಂಡ್ಯ ತಾಲೂಕು ಘಟಕದ ವತಿಯಿಂದ ‘ವಿದ್ಯಾರ್ಥಿಗಳತ್ತ ಜಾನಪದ’ ಶೀರ್ಷಿಕೆಯಡಿ ಆಯೋಜಿಸಿದ್ದ ಸರಣಿ ಜಾನಪದ ಗೀತೆ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಾನಪದ ಉಳಿಸುವ ನಿಟ್ಟಿನಲ್ಲಿ ಪರಿಷತ್ ಕಾರ್ಯಕ್ರಮವನ್ನು ಶಾಲೆಗಳಲ್ಲಿ ನಡೆಸಲು ಹೊರಟಿರುವುದು ಉತ್ತಮ ಕೆಲಸ. ಇಂತಹ ಕೆಲಸಕ್ಕೆ ಕೈ ಜೋಡಿಸಬೇಕಾದದ್ದು, ಎಲ್ಲರ ಕರ್ತವ್ಯ ಎಂದರು.

ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜು ಮಾತನಾಡಿ, ಜಾನಪದ ನಮ್ಮ ಉಸಿರಾಗಬೇಕು. ಅದು ನಮ್ಮ ಶ್ರಮ ಸಂಸ್ಕೃತಿಯ ಕಲೆ. ಮಕ್ಕಳು ಇಂತಹ ಜಾನಪದ ಗೀತೆಗಳನ್ನು ಕಲಿಯುವ ಬಗ್ಗೆ ಆಸಕ್ತಿ ತೋರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಷತ್ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು ಮಾತನಾಡಿ, ಮಲೈ ಮಹದೇಶ್ವರನ ಮೇಲೆ ಅತಿ ಹೆಚ್ಚು ಜಾನಪದ ಹಾಡು ಇದೆ. ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಹಿರಿಯರು ಸಾವಿರಾರು ಹಾಡು ಕಟ್ಟಿ ಹಾಡಿದ್ದಾರೆ. ಅವನ್ನೆ ನಾವು ಇಂದು ಹಾಡುತ್ತಿದ್ದೇವೆ ಎಂದರು.

ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಹನಿಯಂಬಾಡಿ ಶೇಖರ್, ಕಲಾವಿದರಾದ ಬಿ.ರಾಮಕೃಷ್ಣ, ಗೊರವಾಲೆ ಚಂದ್ರಶೇಖರ್, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ, ಮುಖ್ಯಶಿಕ್ಷಕ ಬಿ.ಬಸವರಾಜು ಇತರರಿದ್ದರು. ಪರಿಷತ್‌ನ ಖಜಾಂಚಿ ಸಂಪಹಳ್ಳಿ ಬಸವರಾಜು ಪೌರಾಣಿಕ ನಾಟಕದ ಗೀತೆ ಹಾಡಿ ರಂಜಿಸಿದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಿಂಗಳಿಗೊಂದು ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಈ ಸರಣಿ ಕಾರ್ಯಕ್ರಮದ ಅಂಗವಾಗಿ ಸ್ಪರ್ಧೆಯಲ್ಲಿ ಶಾಲೆಯ ಇಪ್ಪತ್ತೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಡಿ.ದೇವರಾಜ್ ಕೊಪ್ಪ, ರಾಜು ಸ್ವಾಮಿ, ಕೀಲಾರ ಮುದ್ದಪ್ಪ ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net