ಜೀವನ ಕ್ರಮ ಕಲಿಸುವ ಜಾನಪದ ಸಂಗೀತ

28 hly 01
Published on

ಹಳಿಯಾಳ: ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಒಳಗೊಂಡಿರುವ ಜಾನಪದ ಸಂಗೀತ, ಕಲೆ ನಮ್ಮ ಜೀವನ ಕ್ರಮಗಳನ್ನು ಕಲಿಸುತ್ತದೆ, ಜಾನಪದ ಕಲೆ ಜಾಗತೀಕರಣವಾಗಿದ್ದು, ಮಾನವೀಯ ಮೌಲ್ಯಗಳನ್ನು ಒತ್ತಿ ಹೇಳುತ್ತವೆ ಎಂದು ಹಾವೇರಿ ಜಿಲ್ಲೆ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪತ್ರಿಕೋಧ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ವೆಂಕನಗೌಡ ಆರ್. ಪಾಟೀಲ ಹೇಳಿದರು.

ತಾಲೂಕಿನ ಹವಗಿಯಲ್ಲಿಯರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಟಿವಿ, ಧಾರಾವಾಹಿಗಳ ವ್ಯಾಮೋಹದಿಂದ ಹೊರಬಂದು ಜಾನಪದ ಕಲೆಗಳಲ್ಲಿಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಾನಪದ ಕಲೆ ಒಂದೇ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ, ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ. ಈ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು, ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಯುವ ಸ್ಥಳವನ್ನು ಜನಪದ ವಸ್ತುಗಳನ್ನು ಇಟ್ಟು ಅಲಂಕರಿಸಿದ್ದರು. ವಿದ್ಯಾರ್ಥಿಗಳು ಪಂಚೆ, ಶಲ್ಯ ಧರಿಸಿದರೆ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಸೀರೆ, ಲಂಬಾಣಿ ಉಡುಗೆ ತೊಟ್ಟು ಗಮನಸೆಳೆದರು.

ಜಾನಪದ ಕಲಾವಿದರಾದ ಡಾ. ಷರೀಫ್ ಮಾಕಪ್ಪನವರ, ಪ್ರಾಂಶುಪಾಲೆ ಡಾ. ಸಂಗೀತಾ ಕಟ್ಟಿಮನಿ, ಉಪನ್ಯಾಸಕರಾದ ರಾಮಕೃಷ್ಣ ಗೌಡ, ಡಾ. ಪರಮಾನಂದ ದಾಸರ, ಅನ್ನಪೂರ್ಣ ಪಾಟೀಲ, ವೈ.ಎ. ಚವ್ಹಾಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net