ಜೀವನ ಮೌಲ್ಯ, ಸಂಸ್ಕೃತಿಯ ಪ್ರಾಕಾರ ಜಾನಪದ...

Jaanapadha Lead
Published on

ಪ್ರೊ.ಆಶಾ ಕುಮಾರಿ ಅನಿಸಿಕೆ

ಸಂಗೀತ, ಸನ್ಮಾನ ಕಾರ್ಯಕ್ರಮ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಾನಪದವು ಜೀವನ ಮೌಲ್ಯಮತ್ತು ಸಂಸ್ಕೃತಿಯನ್ನು ಕಲಿಸುವ ದೊಡ್ದ ಪ್ರಕಾರವಾಗಿದೆ. ದೇವರ ಸ್ವರೂಪದ ಬಗ್ಗೆಯೂ ಜಾನಪದರು ತಮ್ಮ ಪದಗಳಲ್ಲಿ ವಿವರಿಸುತ್ತಿದ್ದರು. ಈ ರಂಗದಲ್ಲಿ ಪದಗಳು, ಕ್ರೀಡೆಗಳು, ಸಂಗೀತ, ಹಬ್ಬ-ಹರಿದಿನಗಳು ಮತ್ತು ಸಾಹಿತ್ಯವೂ ಇದೆ. ಇಂತಹ ಶ್ರೇಷ್ಠ ಜಾನಪದವನ್ನು ಉಳಿಸಿ, ಬೆಳೆಸಬೇಕು ಎಂದು ಪ್ರಾಂಶುಪಾಲೆ ಪ್ರೊ.ಆಶಾ ಕುಮಾರಿ ಆಶಯ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್​ ಮತ್ತು ತಾಲೂಕು ಘಟಕದ ಆಶ್ರಯದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಕಾಸಕ್ಕಾಗಿ ಜಾನಪದ ಸಂಗೀತ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಡೆಯಬೇಕು ಅಧ್ಯಯನ

ಕನ್ನಡ ಜಾನಪದ ಪರಿಷತ್​ನ ಉಡುಪಿ ಜಿಲ್ಲಾಧ್ಯಕ್ಷ ಡಾ.ಗಣೇಶ್​ ಗಂಗೊಳ್ಳಿ ಪ್ರಸ್ತಾವಿಕವಾಗಿ ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ಇನ್ನಷ್ಟು ಅಧ್ಯಯನ ನಡೆಯಬೇಕಿದೆ. ತನ್ಮೂಲಕ ಈ ಕ್ಷೇತ್ರ ಇನ್ನಷ್ಟು ಮಾಹಿತಿಗಳು ಲಭಿಸಿ, ಅದನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ಎಂದರು.

ಪರಿಷತ್​ನ ಉಡುಪಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್​ ಮಾತನಾಡಿ, ಶುಭ ಹಾರೈಸಿದರು.

ವಿಯೆಟ್ನಾಂನಲ್ಲಿ ಯೋಗ ಗುರುಗಳಾಗಿ ಸಾಧನೆ ಮಾಡಿದ ದೇವರಾಜ್​ ದೇವಾಡಿಗ ನೇರಳಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಪರಿಷತ್​ನ ತಾಲೂಕು ಪದಾಧಿಕಾರಿ ಪ್ರಭಾ ರಾವ್​ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ರಾಘವೇಂದ್ರ ಜಿ.ಜಿ. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಡಾ. ಗಣೇಶ್​ ಗಂಗೊಳ್ಳಿ ಅವರ ಜಾನಪದ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net