

ಮಂಡ್ಯ: ಕಡಿಮೆ ವೆಚ್ಚದಲ್ಲಿ ರೋಗಗಳನ್ನು ಗುಣಮುಖವಾಗಿಸುವ ನಾಟಿ ವೈದ್ಯ ಪದ್ಧತಿ ಅಥವಾ ಜನಪದ ವೈದ್ಯ ಪದ್ಧತಿಯನ್ನು ಜೀವಂತವಾಗಿ ಉಳಿಸಬೇಕಿದೆ ಎಂದು ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.
ನಗರದ ಮಂಡ್ಯ ವಿವಿ ಆವರಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಮಂಡ್ಯ ವಿಶ್ವವಿದ್ಯಾನಿಲಯ, ಕರ್ನಾಟಕ ಸಂಘ, ಜಾನಪದ ಜನ್ನೆಯರು ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವರ್ತಮಾನದಲ್ಲಿ ಜನಪದ ವೈದ್ಯ ವಿಚಾರ ಸಂಕಿರಣ ಹಾಗೂ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿದತ್ತವಾಗಿ ಬೆಳೆಯುವ ಗಿಡಗಳನ್ನು ಬಳಸಿಕೊಂಡು ರೋಗಿಗಳ ಗುಣಪಡಿಸುವ ವಿಧಾನ ಇಂದಿಗೂ ಜೀವಂತವಾಗಿದೆ. ಹಿರಿಯರು ಅಲರ್ಜಿ ಉಂಟಾದರೆ ಅಮೃತಬಳ್ಳಿ ಕಷಾಯ, ಕೋಳಿ ಜ್ವರ ಬಂದರೆ ತುಳಸಿ ಅಮೃತ ಬಳ್ಳಿ ಕಷಾಯ, ಕಾಲಲಿ ಅಣಿ ಇದ್ದರೆ ಉತ್ತರಾಯಣ ಸೊಪ್ಪು ಕಟ್ಟಿ ರೋಗಗಳನ್ನು ಗುಣಪಡಿಸುತ್ತಿದ್ದರು ಎಂದು ಹೇಳಿದರು.
ಪ್ರಾಥಮಿಕ ತುರ್ತು ಚಿಕಿತ್ಸೆ ಮಾಡಬೇಕಾದಾಗ ಮನೆ ಚಿಕಿತ್ಸೆ ಅತಿ ಮುಖ್ಯ. ಅಂತಹ ಸಂದರ್ಭದಲ್ಲಿ ಬಳಸಿಕೊಳ್ಳಬೇಕಾದ ನಮ್ಮ ಸುತ್ತಮುತ್ತಲಿನ ಗಿಡ ಮೂಲಿಕೆಗಳ ಬಗ್ಗೆ ತಿಳಿದಿರಬೇಕು. ನಾಟಿ ವೈದ್ಯ ಪದ್ಧತಿಯಲ್ಲಿ ನಾಲ್ಕು ಹಂತದ ಚಿಕಿತ್ಸೆಯನ್ನು ಕಾಣಬಹುದಾಗಿದೆ. ಅವುಗಳೆಂದರೆ ಮೂಲಿಕೆ ಚಿಕಿತ್ಸೆ, ಆಹಾರ ಚಿಕಿತ್ಸೆ, ಮಾನಸಿಕ ಚಿಕಿತ್ಸೆ ಹಾಗೂ ಶಾರೀರಿಕ ಚಿಕಿತ್ಸೆ. ರೋಗಗಳನ್ನು ಗುಣಪಡಿಸುವುದು ನಾಟಿ ವೈದ್ಯ ಪದ್ಧತಿಯ ಬಹು ಮುಖ್ಯ ಉದ್ದೇಶ. ನಾಟಿ ವೈದ್ಯ ಪದ್ಧತಿಯ ಕುರಿತಾಗಿ ಹೆಚ್ಚಿನ ಸಂಶೋಧನೆಗಳು ಆಗಬೇಕು. ಇದರ ಕುರಿತಾಗಿ ಜಾಗೃತಿಯ ಅಗತ್ಯವಿದೆ. ರಾಜ್ಯ ಸರ್ಕಾರ ನಾಟಿ ವೈದ್ಯ ಪದ್ಧತಿಯ ಕುರಿತಾಗಿ ನಿಗಮ ಸ್ಥಾಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಯುವ ಜನತೆ ಪದವಿಗಳನ್ನು ಮಾನದಂಡ ಮಾಡಿಕೊಳ್ಳದೆ ತಮ್ಮ ಕೆಲಸ ಕಾರ್ಯಗಳನ್ನು ಮಾನದಂಡ ಮಾಡಿಕೊಳ್ಳಿ. ಜಾನಪದ ಕಲೆಗಳು ಸಂಪೂರ್ಣವಾಗಿ ನಶಿಸಿ ಹೋಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ನಮ್ಮ ರಾಜಕಾರಣಿಗಳು ಸಾಂಸ್ಕೃತಿಕ ಪ್ರಜ್ಞೆಯ ಜತೆಗೆ ಇತಿಹಾಸದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಯುವ ಪೀಳಿಗೆ ಆಸಕ್ತಿವಹಿಸಿ ಜನಪದ ಕಲೆಗಳನ್ನು ಸಂರಕ್ಷಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಮಂಡ್ಯ ವಿಶ್ವವಿದ್ಯಾನಿಲಯದ ಬೆಳವಣಿಗೆಯನ್ನು ನೋಡಿಕೊಂಡು ಬೆಳೆದವನು ನಾನು. ಮಂಡ್ಯದಲ್ಲಿ ವಿಶ್ವವಿದ್ಯಾಲಯ, ಇಂಜಿನಿಯರಿಂಗ್ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು ನೋಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಇಂದು ಮಂಡ್ಯದಲ್ಲಿ ಎಲ್ಲವೂ ಇದೆ ಇವುಗಳನ್ನು ಸರಿಯಾಗಿ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಜನಪದವನ್ನು ಬೆಳೆಸುವ ಕೆಲಸವಾಗಬೇಕಿದೆ. ಇಂದಿನ ಯುವ ಜನತೆಗೆ ಪರಿಸರ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮಾಡಿಕೊಳುವ ಹಾದಿಯಲ್ಲಿ ಸಾಗಬೇಕಿದೆ. ಗಿಡ ಮರಗಳಿಗಿರುವ ಸೌಜನ್ಯ ಮತ್ತು ಸಂಸ್ಕಾರ ಎಲ್ಲರಿಗೂ ಬರಬೇಕು ಎಂಬುವುದೇ ಜನಪದದ ಉದ್ದೇಶ ಎಂದು ಭಾವಿಸಿದ್ದೇನೆ. ನಾಳೆಗಳನ್ನು ನೋಡಬೇಕಾದವರು ಹಾಗೂ ಕಟ್ಟಬೇಕಾದ ಯುವಕರು ಸಮಾಜದ ಸತ್ಯಗಳನ್ನು ಶೋಧಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾನಪದ ಜನ್ನೆಯರು ಸಂಘದ ಅಧ್ಯಕ್ಷೆ ಡಾ.ಎಸ್.ಸಿ.ಮಂಗಳಾ, ವಿವಿ ಕುಲಸಚಿವೆ(ಆಡಳಿತ) ಬಿ.ಎನ್.ವೀಣಾ, ಕುಲಸಚಿವ (ಪರೀಕ್ಷಾಂಗ) ಡಾ.ಕೆ.ಯೋಗಾನರಸಿಂಹಾಚಾರಿ, ಜಾನಪದ ವಿದ್ವಾಂಸರಾದ ಪ್ರೊ.ವ.ನಂ.ಶಿವರಾಮು, ಡಾ.ರಾಗೌ, ಡಾ.ಡಿ.ಕೆ.ರಾಜೇಂದ್ರ, ನಾಟಿ ವೈದ್ಯ ಎಚ್.ಸಿ.ಈಶ್ವರ್‌ಕುಮಾರ್, ವಿವಿಯ ಸಿಂಡಿಕೇಟ್ ಸದಸ್ಯ ವಿ.ಎನ್.ನಾಗರಾಜು, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಎಸ್.ಚಂದ್ರಶೇಖರ್ ಇತರರಿದ್ದರು.