ಜನಪದ ಸಾಹಿತ್ಯ ನಮ್ಮ ಸಂಸ್ಕೃತಿ ಅಧ್ಯಯನದ ಮೂಲ ಆಕರ ಆಗಬೇಕು : ಹಂಪಿ ವಿವಿ ಕುಲಪತಿ ಪ್ರೊ.ಡಿ.ವಿ. ಪರಶಿವಮೂರ್ತಿ ಅಭಿಮತ

ksou
Published on

ಮೈಸೂರು: ಕಳೆದ ಎರಡು ದಶಕಗಳಿಂದ ಈಚೆಗೆ ಹಲವಾರು ವಿದ್ವಾಂಸರ ಪ್ರಯತ್ನದಿಂದ ಶಾಸ್ತ್ರೀಯ ಹಾಗೂ ಜನಪದ ವಿಚಾರಗಳು ನಮ್ಮ ನಾಡಿನ ಸಂಸ್ಕೃತಿಯ ಅಧ್ಯಯನದ ಆಕರಗಳು ಎಂಬ ಅಂಶವನ್ನು ಪರಿಗಣಿಸಲಾಗಿದೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಶಿವಮೂರ್ತಿ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವತಿಯಿಂದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ‘ಜನಪದ ಐತಿಹ್ಯಗಳು-ಅವಶ್ಯಕತೆ’ ಕುರಿತು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಶಾಸ್ತ್ರೀಯ ವಿಚಾರಗಳಿಗೂ ಹಾಗೂ ಜನಪದ ವಿಚಾರಗಳಿಗೂ ಹೊಂದಾಣಿಕೆ ಆಗುವುದಿಲ್ಲ, ಅದೇ ಒಂದು ದಿಕ್ಕು, ಇದೇ ಒಂದು ದಿಕ್ಕು ಎಂಬ ಅಭಿಪ್ರಾಯ ಇತ್ತು. ಆದರೆ, ಕಳೆದ ಎರಡು ದಶಕಗಳಿಂದ ಈಚೆಗೆ ಈ ಅಭಿಪ್ರಾಯ ಬದಲಾಗಿದೆ. ಅಕ್ಷರಸ್ಥ ಸಮಾಜ ನೀಡದ ಆಕರಗಳನ್ನು ಅನಕ್ಷರಸ್ಥ ಸಮಾಜದ ಮೂಲಕ ಉತ್ಪತಿಯಾಗಿರುವ ಜನಪದ ಸಾಹಿತ್ಯ ನಮಗೆ ಹೆಚ್ಚಿನ ಆಕರಗಳನ್ನು ನೀಡುತ್ತವೆ ಎಂಬ ಪ್ರಬಲ ಅಭಿಪ್ರಾಯ ಇತ್ತೀಚೆಗೆ ಬೆಳೆಯುತ್ತಿದೆ. ಶಿಷ್ಟ ಸಾಹಿತ್ಯದ ಜತೆಗೆ ಮೌಖಿಕ ಸಾಹಿತ್ಯವನ್ನು ನಮ್ಮ ಸಂಸ್ಕೃತಿಯ ಪುನರಚನೆಯಲ್ಲಿ ಬಳಸಿಕೊಳ್ಳುತ್ತಿರುವುದನ್ನು ನಾವು ದಟ್ಟವಾಗಿ ಕಾಣುತ್ತಿದ್ದೇವೆ ಎಂದರು.

ಮೌಖಿಕ ಸಾಹಿತ್ಯವು ಅನಕ್ಷರಸ್ಥರ ಕಲ್ಪನೆಯ ಸಾಹಿತ್ಯವಾಗಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ. ಅದನ್ನು ಚರಿತ್ರೆ ರಚನೆಗಾಗಲಿ ಅಥವಾ ಸಂಸ್ಕೃತಿ ಅಧ್ಯಯನಕ್ಕೆ ಹೆಚ್ಚು ಅವಲಂಬಿಸುವ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ಈ ಹಿಂದೆ ಇತ್ತು. ಆದರೆ, ಈ ಅಭಿಪ್ರಾಯ ಇತ್ತೀಚೆಗೆ ಬದಲಾಗಿ ಶಿಷ್ಟ ಹಾಗೂ ಜನಪದ ಬೇದ ಇಲ್ಲದೆ, ಕರ್ನಾಟಕದ ಸಂಸ್ಕೃತಿ ಅಧ್ಯಯನದಲ್ಲಿ ಈ ಆಕರಗಳನ್ನು ಬಹಳ ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಹೇಳಿದರು.

ಸಾಮಾನ್ಯ ಜನರ ಹೃದಯದಲ್ಲಿ ಹುಟ್ಟಿದ ಜನಪದ ಸಾಹಿತ್ಯವೇ ನಮ್ಮ ಸಂಸ್ಕೃತಿಯ ಅಧ್ಯಯನಕ್ಕೆ ಮೂಲ ಆಕರ ಆಗಬೇಕಾಗಿತ್ತು. ಆದರೆ, ಜನಪದ ಸಾಹಿತ್ಯದಲ್ಲಿ ಕೆಲವೊಂದು ಕಲ್ಪನೆಗಳು ಹೆಚ್ಚು ಇರುತ್ತದೆ ಎಂಬ ಕಾರಣಕ್ಕೆ ಜನಪದ ಸಾಹಿತ್ಯವನ್ನು ಸಂಸ್ಕೃತಿಯ ಅಧ್ಯಯನಕ್ಕೆ ಗಂಭೀರವಾಗಿ ಇದುವರೆಗೆ ಬಳಸಿಕೊಳ್ಳಲಿಲ್ಲ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್. ವಿಶ್ವನಾಥ್, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮೀ, ಹಣಕಾಸು ಅಧಿಕಾರಿ ಪ್ರೊ.ಎಸ್. ನಿರಂಜನ್‌ರಾಜ್, ಅಧ್ಯಯನ ಕೇಂದ್ರದ ಡೀನ್ ಪ್ರೊ.ಎಂ. ರಾಮನಾಥಂ ನಾಯ್ಡು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net