

ಹುಬ್ಬಳ್ಳಿ: ಓದು-ಬರಹ ಬಾರದ ನಮ್ಮ ಹಿರಿಯರು ಕಟ್ಟಿಕೊಟ್ಟಿರುವಂತಹ ಮೂಲ ಜನಪದ ಸಾಹಿತ್ಯ ನಮ್ಮ ಜೀವನಾಡಿ ಎಂದು ಶಾಸನ ಸಂಶೋಧಕ ಸಾಹಿತಿ ಹನುಮಾಕ್ಷಿ ಗೋಗಿ ಹೇಳಿದರು.
ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಜಾನಪದ ಪರಿಷತ್ತು ಜಿಲ್ಲಾ ಘಟಕ ಧಾರವಾಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿಯ ಜೆಸಿ ನಗರದ ಅಕ್ಕನ ಬಳಗದಲ್ಲಿ ಐದು ದಿನಗಳ ಕಾಲ ಆಯೋಜಿಸಿರುವ ಮೂಲ ಜನಪದ ಹಾಡುಗಾರಿಕೆ ತರಬೇತಿ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮಕ್ಕಳಿಗೆ ಮೂಲ ಜನಪದದ ಅರಿವೇ ಇಲ್ಲ. ಜನರಿಗೆ ಇಂತಹ ತರಬೇತಿಗಳ ಅವಶ್ಯಕತೆ ಇದೆ. ಇವು ಮೇಲಿಂದ ಮೇಲೆ ಎಲ್ಲ ಕಡೆಗೂ ಹಮ್ಮಿಕೊಳ್ಳುವ ಮೂಲಕ ಮುಂದಿನ ಜನಾಂಗಕ್ಕೆ ಈ ಹಾಡುಗಳನ್ನು ಕೊಂಡೊಯ್ಯೋಣ ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ಗೀತಾ ಮುಳೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜನಪದ ತಜ್ಞ ಡಾ. ರಾಮು ಮೂಲಗಿ ಅವರು ಪ್ರಾರಂಭದಲ್ಲಿ ಬೀಸೋ ಕಲ್ಲಿನ ಪದ ಹಾಡಿ ಬರೆಸುವ ಕಾರ್ಯ ಮಾಡಿದರು.
ಪ್ರಮುಖರಾದ ತಾರಾದೇವಿ ವಾಲಿ, ಪ್ರೇಮಾ ಹಟ್ಟಿಹೊಳಿ, ನಿರ್ಮಲಾ ಪಟ್ಟಣಶೆಟ್ಟಿ, ಮಂಜುನಾಥಗೌಡ ಪಾಟೀಲ, ಆರಾಧನಾ ಕುಲಕರ್ಣಿ, ಕುಬೇರಗೌಡ, ಮುರಳಿ ಉಪಸ್ಥಿತರಿದ್ದರು. ಸುವರ್ಣಾ ಪಂಚಾಂಗಮಠ ಪ್ರಾರ್ಥಿಸಿದರು. ನಾಗರತ್ನ ಬೆನ್ನೂರುಮಠ ನಿರೂಪಿಸಿದರು. ನಿರ್ಮಲಾ ಅಂಗಡಿ ವಂದಿಸಿದರು.