

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನಪದ ಸಾಹಿತ್ಯವು ಶಿಷ್ಟಪದ ಸಾಹಿತ್ಯದ ತಾಯಿ ಬೇರು. ಇದು ನಮ್ಮ ಪಿತ್ರಾರ್ಜಿತರ ಬಹು ದೊಡ್ಡ ಆಸ್ತಿ. ಜನಪದ ಸಾಹಿತ್ಯಕ್ಕೆ ನಮ್ಮ ಬದುಕನ್ನು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಇದೆ. ಇದೊಂದು ಮೋಹಕ ಸಾಹಿತ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ ಒಡ್ಡೀನ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಸರೋಜಿನಿ ಶಿಂತ್ರಿ ದತ್ತಿ ನಿಮಿತ್ತ ಗುರುವಾರ ಏರ್ಪಡಿಸಿದ್ದ ಭಜನಾ ಪದಗಳು ಹಾಗೂ ಜಾನಪದ ಗೀತೆಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾನಪದ ಸಾಹಿತ್ಯ ಸಾಗರದಷ್ಟು ಆಳ. ಆಕಾಶದಷ್ಟು ವಿಶಾಲವಾಗಿದ್ದು, ಇದು ನಮ್ಮ ಜನಪದರ ಜೀವನಾನುಭವದ ರಸಟ್ಟಿ. ನಮ್ಮ ಜನಪದರು ಅನರಸ್ಥರಾಗಿದ್ದರೂ ಕಾವ್ಯ ಕಟ್ಟಿ ಭಾವನಾತ್ಮಕವಾಗಿ ಹಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಜನಪದರು ಜೀವನದಲ್ಲಿ ಪಟ್ಟ ಪಾಡುಗಳೇ ಹಾಡುಗಳಾಗಿ ರೂಪಗೊಂಡಿವೆ. ಜನಪದ ಸಾಹಿತ್ಯದಲ್ಲಿ ಪುರುಷರಿಗಿಂತ ಮಹಿಳೆಯರದ್ದೇ ಸಿಂಹಪಾಲು ಎಂದರು.
ವೈದ್ಯಾಧಿಕಾರಿ ಡಾ. ರಾಜಶೇಖರ ಬಶೆಟ್ಟಿ ಮಾತನಾಡಿ, ಡಾ. ಸರೋಜಿನಿ ಶಿಂತ್ರಿ ಅವರು ಸ್ತ್ರೀ ಸಂವೇದನಾ ಬರಹಗಾರರು ಮತ್ತು ಹೋರಾಟಗಾರರಾಗಿದ್ದರು. ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಅವರು ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರೂ ಜಾನಪದ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿದವರು. ಶಿಸ್ತು ಸಮಯ ಪ್ರಜ್ಞೆಗೆ ಇನ್ನೊಂದು ಹೆಸರೇ ಡಾ. ಸರೋಜಿನಿ ಶಿಂತ್ರಿ ಎಂದರು.
ಉಪ್ಪಿನಬೆಟಗೇರಿಯ ಶ್ರೀ ಮಲ್ಲಿಕಾರ್ಜುನ ಭಜನಾ ತಂಡದವರು ಜಾನಪದ ಹಾಗೂ ಭಜನಾ ಪದಗಳನ್ನು ಪ್ರಸ್ತುತಪಡಿಸಿದರು. ಶಂಕರ ಕುಂಬಿ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.