

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನಪದ ಕಾವ್ಯ ಮೊದಲಿನಿಂದಲೂ ಪರಿಶ್ರಮದ ತಳಹದಿಯಲ್ಲಿ ಹುಟ್ಟಿಕೊಂಡಿತು. ಮನುಷ್ಯನ ಅನುಭವ ಮತ್ತು ಆಲೋಚನೆಗಳನ್ನು ಹಾಡು ಮತ್ತು ಕಥೆಗಳ ಮೂಲಕ ಅಭಿವ್ಯಕ್ತಿಗೊಳಿಸುವ ಪರಿಪಾಠ ಅನನ್ಯವಾದದ್ದು ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ. ಆರ್. ದುರ್ಗಾದಾಸ ಹೇಳಿದರು.
ನಗರದ ಶಿವಾಜಿ ವೃತ್ತ ಬಳಿಯ ಕೆ.ಇ. ಬೋರ್ಡ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಜನಪದರು ಬಹುತೇಕ ಆಸ್ತಿಕರು. ಹೀಗಾಗಿ ಜಾನಪದ ಸಾಹಿತ್ಯ ಪ್ರಕಾರದಲ್ಲಿ ಸಜೀವ, ನಿರ್ಜೀವ ವಸ್ತುಗಳೆಲ್ಲ ದೇವರ ಪ್ರತಿರೂಪಗಳೇ ಆಗಿವೆ. ಜನಪದರು ಕಾಣದ ದೇವರಲ್ಲಿ ಇಟ್ಟ ನಂಬಿಕೆ ಅಗಾಧವಾದದ್ದು. ಅದು ಬದುಕು ಎದುರಿಸುವ ನಿಟ್ಟಿನಲ್ಲಿ ಆತ್ಮಸ್ಥೆರ್ಯ ಒದಗಿಸುತ್ತದೆ. ಜಾನಪದ ಸಾಹಿತ್ಯ ಸಮಷ್ಠಿ ಪ್ರಜ್ಞೆಯಿಂದ ಕೂಡಿದೆ. ಅಲ್ಲಿ ಭೇಧ ಭಾವಕ್ಕೆ ಅವಕಾಶವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರೂ ಆಸ್ತಿಯಿಂದ ದೊಡ್ಡವರಾಗದೆ ಗುಣದಿಂದ ದೊಡ್ಡವರಾಗಬೇಕು ಎಂದು ಜಾನಪದ ಸಾಹಿತ್ಯ ಪ್ರತಿಪಾದಿಸುತ್ತದೆ ಎಂದರು.
ಕೆ. ಇ. ಬೋರ್ಡ ಕಾರ್ಯದರ್ಶಿ ಡಿ.ಎಸ್ ರಾಜಪುರೋಹಿತ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಧಾರವಾಡ ಈ ಭಾಷೆಯ ಸಾಹಿತ್ಯದ ಕೇಂದ್ರವಾಗಿದೆ. ಮಕ್ಕಳ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು. ಇದು ಅನಿವಾರ್ಯ ಸಹ ಎಂದರು.
ಕೆ.ಇ. ಬೋರ್ಡ ಕಾರ್ಯಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿದರು. ಜನಪದ ವಸ್ತು ಸಂಗ್ರಹಾಲಯವನ್ನು ಗಣ್ಯರು ಉದ್ಘಾಟಿಸಿದರು. ನಂತರ ನಡೆದ ವಿವಿಧ ಗೋಷ್ಠಿಗಳನ್ನು ಶಿಕ್ಷಣಾಧಿಕಾರಿ ಡಾ. ಪೂರ್ಣಿಮಾ ಮುಕ್ಕುಂದಿ, ಸಹಾಯಕ ಪ್ರಾಧ್ಯಾಪಕ ಡಾ. ನಿಂಗಪ್ಪ ಮುದೇನೂರು ನಿರ್ವಹಿಸಿದರು. ವಿದ್ಯಾರ್ಥಿಗಳು ಸುಮಾರು 12 ಪ್ರಬಂಧಗಳನ್ನು ಮಂಡಿಸಿದರು.
ಕೆ.ಇ. ಬೋರ್ಡ ಅಧ್ಯಕ್ಷ ಡಾ. ಎಂ.ಎನ್. ಜೋಶಿ, ಖಜಾಂಚಿ ಎನ್.ಎಸ್. ಕುಲಕರ್ಣಿ, ಪ್ರಾಚಾರ್ಯ ಪ್ರೊ. ಎಂ.ಎ. ಸಿದ್ದಾಂತಿ, ವಿದ್ಯಾರಣ್ಯ ಪಿಯು ಕಾಲೇಜು ಪ್ರಾಚಾರ್ಯೆ ಡಾ. ಶರಣಮ್ಮ ಗೋರೆಬಾಳ, ಪ್ರೊ.ಮಂಜುನಾಥ ಜಿ., ಇತರರು ಇದ್ದರು.
ಬಿ.ಆರ್ ಉಡಕೇರಿ ನಿರೂಪಿಸಿದರು. ಸುನಿತಾ ಸತ್ಯಣ್ಣವರ ವಂದಿಸಿದರು.