ಅ. 27 ರಂದು ರಾಜಾಂಗಣದಲ್ಲಿ ಜಾನಪದ ಹಬ್ಬ

udp-talluru
Published on

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆಮಠ, ಕೃಷ್ಣಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ತಲ್ಲೂರ್ಸ್​ ಫ್ಯಾಮಿಲಿ ಟ್ರಸ್ಟ್​ ಹಾಗೂ ಜಾನಪದ ಸಾಹಿತ್ಯ ಸಾಂಸತಿಕ ಪ್ರತಿಷ್ಠಾನ ಸಹಯೋಗದಲ್ಲಿ ಅ.27ರಂದು ಬೆಳಗ್ಗೆ 9.30ರಿಂದ ಸಾಯಂಕಾಲ 4:30ರ ವರೆಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಜಾನಪದ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್​ ಜಿಲ್ಲಾ ಘಟಕದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ಹಬ್ಬದಲ್ಲಿ ಕುಣಿತ ಭಜನೆ, ಹೋಳಿ ಕುಣಿತ, ಗೋಂದೋಳು ಕುಣಿತ, ಜಾನಪದ ವಾದ್ಯಗೋಷ್ಠಿ, ಕಲಾಮಯ ಉಡುಪಿ ತಂಡದವರಿಂದ ವೈವಿಧ್ಯಮಯ ಜಾನಪದ ನೃತ್ಯ ಹಾಗೂ ಸಂಗೀತ ಪ್ರದರ್ಶನ ನಡೆಯಲಿದೆ. ಕೇರಳ ವಯನಾಡಿನ ಅಪರೂಪದ ಜಾನಪದ ಕಲೆ ಗೋತ್ರಂ ನೃತ್ಯ ವಿಶೇಷ ಆಕರ್ಷಣೆಯಾಗಿದೆ ಎಂದರು.

ಪರಿಷತ್​ ಕಾರ್ಯದರ್ಶಿ ರವಿರಾಜ ನಾಯಕ್​ ಮಾತನಾಡಿ, ಪರ್ಯಾಯ ಶ್ರೀ ಪುತ್ರಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜಾನಪದ ಹಬ್ಬ ಉದ್ಘಾಟಿಸಲಿದ್ದು, ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್​ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗುಜ್ಜಾಡಿ ಸ್ವರ್ಣ ಜ್ಯವೆಲ್ಲರ್ಸ್​ ಮುಖ್ಯ ಹಣಕಾಸು ಅಧಿಕಾರಿ ವರುಣ್​ ರಾಮದಾಸ ನಾಯಕ್​ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಾಯಂಕಾಲ 3:45ಕ್ಕೆ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್​ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್​ ಸೊರಕೆ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅಶೋಕ ಕುಮಾರ್​ ಕೊಡವೂರು ಮುಖ್ಯ ಅತಿಥಿಗಳಾಗಿರುವರು ಎಂದರು.

ಜಾನಪದ ಸಾಹಿತ್ಯ ಸಾಂಸತಿಕ ಪ್ರತಿಷ್ಠಾನದ ಅಧ್ಯಕ್ಷ ಸುನೀಲ್​ ಕುಮಾರ್​ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್​ ಕಾರ್ಯಧ್ಯಕ್ಷ ಬಿ. ಅರುಣ್​ ಕುಮಾರ್​ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಗೋಪಾಲ್​ ಸಿ. ಬಂಗೇರ ಹಾಗೂ ಖಜಾಂಚಿ ಪ್ರಶಾಂತ್​ ಭಂಡಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net