ಹಳ್ಳಿ ಬದುಕಿನ ಪ್ರತಿಬಿಂಬ ಜಾನಪದ...

UDP-28-3-Jaanapadha
ಉಡುಪಿಯ ರಾಜಾಂಗಣದಲ್ಲಿ ನಡೆದ 'ಜಾನಪದ ಹಬ್ಬ'ದ ಸಮಾರೋಪದಲ್ಲಿ ಯೋಗ ಶಿಕ್ಷಕಿ ಶೋಭಾ ಶೆಟ್ಟಿ ಅವರಿಗೆ ಸುಗುಣೇಂದ್ರ ಶ್ರೀಗಳು 'ಜಾನಪದ ಸಾಂಸ್ಕೃತಿಕ ಯೋಗ ಸಾಧಕಿ' ಪ್ರಶಸ್ತಿ ಪ್ರದಾನಿಸಿದರು. ಡಾ. ನೀ.ಬಿ. ವಿಜಯ ಬಲ್ಲಾಳ್​, ಸುರೇಶ್​ ಶೆಟ್ಟಿ, ಡಾ.ತಲ್ಲೂರು ಶಿವರಾಮ ಶೆಟ್ಟಿ, ಪೂರ್ಣಿಮಾ, ಗಿರಿಜಾ ತಲ್ಲೂರು, ಡಾ.ಜಗದೀಶ್​ ಶೆಟ್ಟಿ ಇತರರಿದ್ದರು.
Published on

ಡಾ. ನೀ.ಬಿ. ವಿಜಯ ಬಲ್ಲಾಳ್​ ಅಭಿಮತ

ಜಾನಪದ ಹಬ್ಬ ಸಮಾರೋಪ ಸಮಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೃಷಿಕರು ತಮ್ಮ ಬದುಕಿನ ಆಯಾಸದ ಮಧ್ಯೆ ಮನೋರಂಜನೆಗಾಗಿ ಹಾಡು, ನೃತ್ಯ ಕಟ್ಟಿಕೊಂಡಿದ್ದು, ಅದು ನಮ್ಮ ಗ್ರಾಮೀಣ ಭಾರತದ ಸಂಪತ್ತಾಗಿದೆ. ಜಾನಪದ ಕಲೆ, ಸಂಗೀತಕ್ಕೆ ಅದರದ್ದೇ ಆದ ಶಕ್ತಿಯಿದೆ. ನಮ್ಮ ನಾಡಿನ ಜಾನಪದ ಕಲೆಗಳು ಹಳ್ಳಿಯ ಬದುಕನ್ನು ಪ್ರತಿಬಿಂಬಿಸುವ ಕಲೆಯಾಗಿದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನೀ.ಬಿ. ವಿಜಯ ಬಲ್ಲಾಳ್​ ಹೇಳಿದರು.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್​ ಉಡುಪಿ ಜಿಲ್ಲಾ ಘಟಕ, ತಲ್ಲೂರ್ಸ್​ ಫ್ಯಾಮಿಲಿ ಟ್ರಸ್ಟ್​ ಉಡುಪಿ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ವತಿಯಿಂದ ಭಾನುವಾರ ರಾತ್ರಿ ನಡೆದ ಜಾನಪದ ಹಬ್ಬ-2024 ಸಮಾರೋಪದಲ್ಲಿ ಮಾತನಾಡಿದರು.

ಸಂಘ-ಸಂಸ್ಥೆಗಳ ಪ್ರೋತ್ಸಾಹ ಅಗತ್ಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ದೈವಾರಾಧನೆ, ನಾಗಾರಾಧನೆ ಸೇರಿದಂತೆ ಹಲವಾರು ಜಾನಪದ ಪ್ರಕಾರಗಳಿದ್ದು ನಿರಂತರ ಚಟುವಟಿಕೆಯಲ್ಲಿವೆ. ಜಾನಪದ ಕಲಾವಿದರು ಆರ್ಥಿಕವಾಗಿ ತುಂಬ ಹಿಂದುಳಿದಿದ್ದು ಅವರಿಗೆ ಸಂಘ-ಸಂಸ್ಥೆಗಳ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಕಲಾವಿದರಿಗೆ ಗೌರವ

ತಲ್ಲೂರ್ಸ್​ ಫ್ಯಾಮಿಲಿ ಟ್ರಸ್ಟ್​ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಪರಿಷತ್​ ಮೂಲಕ ನಾಡಿನ ಜಾನಪದ ಕಲೆಗಳನ್ನು ಉಳಿಸುವ, ಕಲಾವಿದರನ್ನು ಪ್ರೋತ್ಸಾಹ ನೀಡುವ ಕಾರ್ಯ ಮಾಡಲಾಗುತ್ತಿದೆ. ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಕೈಂಕರ್ಯದಿಂದ ಕಲೆ, ಕಲಾವಿದರಿಗೆ ಒಳಿತಾದರೆ ಅದೇ ನನಗೆ ಸಾರ್ಥಕ ಭಾವ ಮೂಡಿಸುತ್ತದೆ ಎಂದರು.

ಪರಿಷತ್​ನ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಅರುಣಕುಮಾರ್​ ಹೆಗ್ಡೆ, ಖಜಾಂಚಿ ಪ್ರಶಾಂತ ಭಂಡಾರಿ, ಎಂ.ಕೃಷ್ಣ ಆಳ್ವ, ಗೌರವಾಧ್ಯಕ್ಷ ಶ್ರೀಧರ ಶೇಣವ, ಶಿವಪ್ರಸಾದ್​ ಶೆಟ್ಟಿ, ಅಂಬಲಪಾಡಿ ರೋಟರಿ ಕ್ಲಬ್​ ಅಧ್ಯಕ್ಷ ರಾಜು ಪೂಜಾರಿ ಉಪಸ್ಥಿತರಿದ್ದರು.

ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿಯ ಅಧ್ಯಕ್ಷ ಸುನೀಲ್​ಕುಮಾರ್​ ಶೆಟ್ಟಿ ಸ್ವಾಗತಿಸಿದರು. ಅನುಷಾ ಆಚಾರ್ಯ ವಂದಿಸಿದರು. ಜಿಲ್ಲಾ ಜಾನಪದ ಪರಿಷತ್​ನ ಕಾರ್ಯದರ್ಶಿ ರವಿರಾಜ್​ ನಾಯಕ್​ ಕಾರ್ಯಕ್ರಮ ನಿರೂಪಿಸಿದರು.

ಯೋಗ ಸಾಧಕಿಗೆ ಪ್ರಶಸ್ತಿ ಪ್ರದಾನ

ಐಯ್ಯಂಗಾರ್​ ಯೋಗ ಶಿಕ್ಷಕಿ ಶೋಭಾ ಶೆಟ್ಟಿ ಅವರನ್ನು ಪತಿ, ಲಯನ್ಸ್​ ಮಾಜಿ ಜಿಲ್ಲಾ ಗವರ್ನರ್​ ಸುರೇಶ್​ ಶೆಟ್ಟಿ ಸಮೇತ ಸನ್ಮಾನಿಸಿದ ಪುತ್ತಿಗೆ ಸುಗುಣೇಂದ್ರ ಶ್ರೀ, 'ಜಾನಪದ ಸಾಂಸ್ಕೃತಿಕ ಯೋಗ ಸಾಧಕಿ' ಪ್ರಶಸ್ತಿ ನೀಡಿ ಗೌರವಿಸಿದರು. ಜನಪದ ಕಲೆಗಳನ್ನು ಉಳಿಸಿ, ಬೆಳೆಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಹಾರೈಸಿದರು. ತಲ್ಲೂರ್ಸ್​ ಫ್ಯಾಮಿಲಿ ಟ್ರಸ್ಟ್​ನ ನಿರ್ದೇಶಕಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಸನ್ಮಾನಿತರನ್ನು ಪರಿಚಯಿಸಿದರು. ಜಾನಪದ ಹಬ್ಬದಲ್ಲಿ ಪ್ರದರ್ಶನ ನೀಡಿದ ವಿವಿಧ ಜಾನಪದ ತಂಡದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ನಮ್ಮ ನಾಡಿನ ಜಾನಪದ ಶ್ರೀಮಂತಿಕೆ ಇತರರು ಹೊಟ್ಟೆಕಿಚ್ಚು ಪಡುವಷ್ಟಿದೆ. ಅನಿವಾರ್ಯ ಬದಲಾವಣೆ ಸ್ವೀಕರಿಸಿ, ವೈಶಿಷ್ಟ್ಯ ಕಾಪಾಡಿಕೊಳ್ಳುತ್ತಿರುವುದು ಸ್ವಾಗತಾರ್ಹ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಪ್ರೀತಿಸಬೇಕು. ಇಲ್ಲಿನ ಆಹಾರ ಪದ್ಧತಿ, ನೀರಿನ ಹಂಚಿಕೆಯ ಬಗ್ಗೆಯೂ ಶಿಲಾಶಾಸನಗಳು ಪತ್ತೆಯಾಗಿವೆ. | ಡಾ.ಜಗದೀಶ್​ ಶೆಟ್ಟಿ. ಆಡಳಿತಾಧಿಕಾರಿ, ಮಾಹೆ ಸಾಂಸ್ಕೃತಿಕ ಸಂಸ್ಥೆ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net