ಮಂಡ್ಯ ವಿವಿಗಾಗಿ ಸಾಂಸ್ಕೃತಿಕ ಜಾತ್ರೆ ಆಯೋಜಿಸೋಣ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Folk fair at Govt Women's College Mandya
Published on

ಮಂಡ್ಯ: ಒಂದು ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ ನಗರದಲ್ಲಿ ಸಾಂಸ್ಕೃತಿಕ ಜಾತ್ರೆ ಆಯೋಜಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧವಾಗುತ್ತಿದೆ ಎಂದು ರವಿಕುಮಾರ್ ಗಣಿಗ ಹೇಳಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ(ಸ್ವಾಯತ್ತ) ಆಯೋಜಿಸಿದ್ದ ಜಾನಪದ ಜಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ವಿಶ್ವವಿದ್ಯಾನಿಲಯ ಮುಚ್ಚೇ ಹೋಯಿತು ಎಂದು ಕೆಲವರು ಹೇಳಿದ್ದರು. ಆದರೆ ವಿವಿ ಉಳಿಸಿಕೊಳ್ಳಲಾಗಿದೆ. ಈಗಾಗಲೇ ಮೂರು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದಲ್ಲದೆ ಮಂಡ್ಯ ವಿಶ್ವವಿದ್ಯಾನಿಲಯಕ್ಕಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಸಂಬಂಧ ಶೀಘ್ರವೇ ಎಲ್ಲ ಕಾಲೇಜಿಗೂ ಮಾಹಿತಿ ತಲುಪಲಿದೆ. ಲಕ್ಷಾಂತರ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡೋಣ. ಅದರಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ ಎಂದರು.

ಜಾನಪದ ಕಲೆ ನಶಿಸಿ ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಜಾನಪದ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಮುತುವರ್ಜಿ ವಹಿಸಿ ಈ ವರ್ಷದಿಂದ ಕಾಲೇಜಿನಲ್ಲಿ ಜಾನಪದ ಕಾರ್ಯಕ್ರಮ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಹಲವು ವರ್ಷದಿಂದಲೇ ಆಚರಿಸಲಾಗುತ್ತಿದ್ದು, ಸಿಎಂ ಅವರ ನಿರ್ಧಾರಕ್ಕೆ ನಮ್ಮ ಕಾಲೇಜು ಸ್ಪೂರ್ತಿಯಾಗಿರಬಹುದು. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಪ್ರಭಾವಕ್ಕೊಳಗಾಗಿ ಅನೇಕ ಜಾನಪದ ಕಲೆ, ಗ್ರಾಮೀಣ ಆಟ, ಸಂಸ್ಕೃತಿ ಅವನತಿ ಅಂಚಿನಲ್ಲಿ ನಿಂತಿರುವುದು ದುಃಖಕರ ವಿಷಯ ಎಂದು ವಿಷಾದ ವ್ಯಕ್ತಪಡಿಸಿದರು.

ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ ಮಾತನಾಡಿ, ಮಂಡ್ಯ ಜಾನಪದದ ತವರೂರು. ಕಲಾವಿದರು ಒಂದಾಗಿ ಉತ್ಸವ, ಜಾತ್ರೆಗಳಲ್ಲಿ ಸಾಂಸ್ಕೃತಿಕವಾಗಿ ಸಮನ್ವಯ ಸಾಧಿಸಲು ಜಾನಪದ ಜಾತ್ರೆ ಸಹಾಯ ಮಾಡುತ್ತದೆ. ತಾಯ್ತನದ ತತ್ವವನ್ನು ಎಲ್ಲರಲ್ಲೂ ಬಿತ್ತುವ ಕೆಲಸ ಜಾನಪದ ಮಾಡುತ್ತಿದೆ. ನಮ್ಮ ಗೂಡು ಬಿಟ್ಟು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ. ಆಗ ಜ್ಞಾನ, ಬುದ್ಧಿಶಕ್ತಿ, ಆತ್ಮಬಲ ಹೆಚ್ಚಾಗುವುದು. ಪ್ರಸ್ತುತ ಸನ್ನಿವೇಶದಲ್ಲಿ ಗುದ್ದಲಿ, ಪಿಕಾಸಿ, ಎತ್ತಿನ ಗಾಡಿಯನ್ನು ಹಳ್ಳಿಯಲ್ಲೇ ಹುಡುಕುವುದು ಕಷ್ಟವಾಗುವಂತಹ ಸಂದರ್ಭದಲ್ಲಿ ನಾವಿರುವುದು ವಿಪರ್ಯಾಸ ಎಂದು ಹೇಳಿದರು.

ಜಾನಪದ ಸಂಸ್ಕೃತಿ ಭಾರತೀಯರಿಗೆ ಪರಂಪರೆಯಿಂದಲ್ಲೇ ಬಂದಿದೆ. ಇಂದಿನ ದಿನಗಳಲ್ಲಿ ಜಾನಪದ ಸಂಸ್ಕೃತಿ ಬೆಳೆಸುವುದರ ಜತೆಗೆ ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ಪೀಳಿಗೆಗೆ ನಮ್ಮ ನಾಡಿನ ಹೆಮ್ಮೆಯ ಜಾನಪದ ಸಂಸ್ಕೃತಿಯನ್ನು ಕೊಡುಗೆಯಾಗಿ ನೀಡಬೇಕು ಎಂದು ತಿಳಿಸಿದರು.

ಮುಡಾ ಅಧ್ಯಕ್ಷ ನಹೀಂ, ಪ್ರಾಂಶುಪಾಲ ಡಾ.ಗುರುರಾಜ್‌ಪ್ರಭು, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಎಚ್.ಎಸ್.ನಿಂಗರಾಜು, ಖಜಾಂಚಿ ಡಾ.ಕೆ.ಎಂ.ಮಂಗಳಮ್ಮ, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಎಸ್.ಪಿ.ಹೇಮಲತಾ, ಕೆ.ಎಸ್.ಆನಂದ್, ಎಂ.ಬಿ. ಪ್ರತಾಪ್ ಇತರರಿದ್ದರು.

Folk fair at Govt Women's College Mandya
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net