

ಬೀರೂರು: ಜಾನಪದ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಎಂದು ಸಿ.ಎನ್.ಕ್ಷೇತ್ರಪಾಲ ತಿಳಿಸಿದರು.
ಗಿರಿಯಾಪುರದ ಶ್ರೀ ಗುರುಕೃಪಾ ಪ್ರೌಢಶಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ನಡೆದ ಜಾನಪದ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದರು.ಆಧುನಿಕ ಜಗತ್ತಿನಲ್ಲಿ ಜಾನಪದ ಸಂಸ್ಕೃತಿ ಉಳಿಸುವುದು ಕಷ್ಟಕರವಾಗಿದೆ. ಮುಂದಿನ ತಲೆಮಾರಿಗೆ ಉಳಿಸುವ ದೊಡ್ಡ ಆಸ್ತಿಯಾಗಿದೆ. ಒಂದು ಸಂಸ್ಕೃತಿ ಉಳಿಯುವ ಮೂಲಕ ಅಲ್ಲಿನ ಜಾನಪದ ಪರಂಪರೆ ಅಸ್ತಿತ್ವ ಉಳಿಸಿಕೊಳ್ಳುತ್ತದೆ. ಜಾನಪದ ಪರಂಪರೆ ಇಲ್ಲದೆ ಆಧುನಿಕ ಜಗತ್ತಿನಲ್ಲಿ ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಜಾನಪದ ಸಂಸ್ಕೃತಿ ನಮಗೆಲ್ಲರಿಗೂ ಅನಿವಾರ್ಯವಾಗಿದೆ ಎಂದರು.ಜಾನಪದ ಕಲಾವಿದ ಡಾ. ಎಂ.ಆರ್.ಬಸಪ್ಪ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಜಾನಪದದಲ್ಲಿ ಪಿಎಚ್.ಡಿ ಪ್ರಬಂಧ ಮಂಡಿಸುತ್ತಿದ್ದಾರೆ. ಜಾನಪದ ವಿಶ್ವವಿದ್ಯಾಲಯವನ್ನು ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಸ್ಥಾಪಿಸಿರುವುದು ಹೆಮ್ಮೆ ಎಂದು ಹೇಳಿದರು. ಜಾನಪದ ಮತ್ತು ಮಹಿಳೆ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಮುಗುಳಿ ಲಕ್ಷ್ಮೀ ದೇವಮ್ಮ ಮಾತನಾಡಿ, ಮಹಿಳೆ ಸಂಸ್ಕೃತಿಯ ಪ್ರತೀಕ. ಜಾನಪದದಲ್ಲಿ ರಂಗೋಲಿ ಹಾಕುವುದರಿಂದ ಹಿಡಿದು ಕಣ ಸಂಸ್ಕೃತಿಯವರೆಗೆ ತನ್ನದೇ ಆದ ಛಾಪು ಮಹಿಳೆ ಮೂಡಿಸಿದ್ದಾಳೆ. ಧಾನ್ಯ ಬೀಸುವುದು, ಕುಟ್ಟುವ ಸಂದರ್ಭಗಳಲ್ಲಿ ಶ್ರಮ ಮರೆಯುವ ಸಲುವಾಗಿ ಸೋಬಾನೆ ಪದಗಳನ್ನು ಹಾಡುವ ಹೇಳುವ ಮೂಲಕ ಸಂಸ್ಕೃತಿ ಉಳಿಸಿದ್ದಾರೆ ಎಂದು ಹೇಳಿದರು. ಅಜ್ಜಂಪುರ ತಾಲೂಕು ಘಟಕದ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಜಾನಪದದ ವಿವಿಧ ಪ್ರಕಾರಗಳ ಮಾಹಿತಿ ನೀಡಿದರು. ಗಿರಿಯಾಪುರ ಗುರುಕೃಪಾ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷರಾದ ಜಿ.ಸಿ.ಜಯಸೋಮನಾಥ್, ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿದರು.ಜಿಲ್ಲಾ ಕಸಾಪ ಸಂಚಾಲಕರಾದ ಎಸ್.ಪರಮೇಶ್ವರಪ್ಪ, ಮಹಿಳಾ ಘಟಕದ ಕೋಶಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ಹಿರಿಯ ಸದಸ್ಯ ಬಿ.ಎಸ್.ಕೆಂಪರಾಜು, ಆರ್.ಜಿ.ಕಷ್ಣಸ್ವಾಮಿ, ಗುರುಕೃಪಾ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಧರಣೇಂದ್ರಮೂರ್ತಿ, ಶಿಕ್ಷಕರಾದ ಜಿ.ಎಂ.ಯತೀಶ್, ಕಾಂತರಾಜು ಇದ್ದರು.