

ಮೈಸೂರು:ಮೈಸೂರು ಭಾಗದಲ್ಲಿ ಸಮೃದ್ಧವಾಗಿರುವ ಜಾನಪದ ಕಲೆಯನ್ನು ದೇಶದೆಲ್ಲೆಡೆ ಪ್ರದರ್ಶನ ಮಾಡಿ ಮತ್ತಷ್ಟು ಮುನ್ನೆಲೆ ತರಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮಿಅಭಿಪ್ರಾಯಪಟ್ಟರು.
ರಂಗಜಗಲಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಂಗ ಸಿರಿ’ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆ ಮೈಸೂರು ಭಾಗದಲ್ಲಿ ಸಮೃದ್ಧವಾಗಿದೆ. ಆದರೆ, ಇತ್ತೀಚೆಗೆ ಚಟುವಟಿಕೆ ಕಡಿಮೆ ಆಗಿದೆ. ಹಾಗಾಗಿ ನಮ್ಮ ಕಲೆಯನ್ನು ದೇಶದ ಎಲ್ಲೆಡೆ ಪ್ರದರ್ಶಿಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ಗೀಳಿಗೆ ಬೀಳುತ್ತಿದ್ದಾರೆ. ಇದು ಯುವಕರ ಬೆಳವಣಿಗೆ ಹಾಗೂ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ಇಂತಹ ರಂಗತರಬೇತಿ ಶಿಬಿರದಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ವಿ.ನಂಜರಾಜ ಅರಸು ಮಾತನಾಡಿ, ಮೈಸೂರಿನಲ್ಲಿ ಎಲ್ಲ ಪ್ರಾಕಾರಗಳ ಕಲೆಗಳಿಗೂ ಪ್ರೇಕ್ಷಕರ ಪ್ರೋತ್ಸಾಹವಿದೆ. ಕಲೆ, ಸಾಹಿತ್ಯ, ಜಾನಪದ, ನಾಟಕ , ಸಂಗೀತ ಸೇರಿದಂತೆ ಇತರೆ ಕಲೆಗಳನ್ನು ಭದ್ರ ಬುನಾದಿ ಹಾಕಿದವರಲ್ಲಿ ಮೈಸೂರು ಸಂಸ್ಥಾನದ ಕೊಡುಗೆ ಅಪಾರ. ಇದೀಗ ರಾಜ್ಯ ಸರ್ಕಾರವೂ ಕನ್ನಡದ ನಾಡು-ನುಡಿಗೂ ಹೆಚ್ಚಿನ ಆದ್ಯತೆ ನೀಡಿರುವುದು ಸಂತೋಷ ಸಂಗತಿ ಎಂದರು.
ರಂಗ ಜಗಲಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ದಯಾನಂದ, ಕಾರ್ಯಕ್ರಮದಲ್ಲಿ ಜಿ.ಬಿ.ಸರಗೂರು ಕಾಶಿವಿಶ್ವನಾಥ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಜಿಬಿಎಸ್ ಸಿದ್ದೇಗೌಡ, ಜಾನಪದ ಸಂಘಟಕ ಆರ್.ಕೆ.ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಗುಂಡ್ಲುಪೇಟೆ ತಾಲೂಕಿನ ಮಹದೇವ ಸ್ವಾಮಿ, ಪೂರಿಗಾಲಿ ಮಾದೇವು ಹಾಗೂ ಆರ್.ಕೆ.ಸ್ವಾಮಿ ತಂಡದಿಂದ ನೀಲಗಾರರ ಪದಗಳ ಗಾಯನ, ತಮಟೆ ಕಲಾ ಪ್ರದರ್ಶಿಸಲಾಯಿತು. ಬಳಿಕ ಮೈಸೂರು ಸಂಜೆ ರಂಗತಂಡದಿಂದ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ರಚಿತ ರೂಬಿನ್ ಸಂಜಯ್ ನಿದೇರ್ಶನದ, ವಿಶ್ವನಾಥ್, ಸಿದ್ದೇಶ್ ಬದನವಾಳು ಸಂಗೀತ ನೀಡಿರುವ ಮಂಥರಾ ನಾಟಕ ಪ್ರದರ್ಶನಗೊಂಡಿತು.