

ಕಡೂರು: ಜನಪದ ಕಲೆಯಲ್ಲಿ ಯುವಜನತೆ ಆಸಕ್ತಿ ಹೊಂದದ ಕಾರಣ ಕಲೆಗೆ ಹೆಚ್ಚು ಮನ್ನಣೆ ದೊರಕುತ್ತಿಲ್ಲ ಎಂದು ಜಾನಪದಶ್ರೀ ಪುರಸ್ಕೃತ ಮಾಳೇನಹಳ್ಳಿ ಬಸಪ್ಪ ಕಳವಳ ವ್ಯಕ್ತಪಡಿಸಿದರು.
ಅಜ್ಜಂಪುರ ಮಾರಿಕಾಂಬಾ ದೇವಾಲಯದಲ್ಲಿ ಹೂಲಿಹಳ್ಳಿ ಮಾರುತಿ ವೀರಗಾಸೆ ಜಾನಪದ ಕಲಾಸೇವಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ನಡೆದ ಐದು ದಿನಗಳ ಮೂಲ ಚರ್ಮವಾದ್ಯಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ವೀರಗಾಸೆ ನೃತ್ಯ ತಂಡಗಳು ಪ್ರತಿ ಹಳ್ಳಿಯಲ್ಲಿಯೂ ಇವೆ. ಕಡೂರು, ತರೀಕೆರೆ, ಅಜ್ಜಂಪುರ ತಾಲೂಕಿನಲ್ಲಿ ಹೆಚ್ಚು ಇರುವುದು ಹೆಮ್ಮೆಯ ಸಂಗತಿ. ಆದರೆ ಇತ್ತೀಚೆಗೆ ಈ ಕಲೆ ಮೇಲೆ ಯುವಜನರಿಗೆ ಆಸಕ್ತಿ ಇಲ್ಲ. ವೀರಗಾಸೆ ಕಲೆಯಲ್ಲಿ ನುಡಿಸುವ ಚರ್ಮವಾದ್ಯಗಳಾದ ಚೌಮೇಳ, ಕರಡೆ, ದೋಣು ಮುಂತಾದ ವಾದ್ಯಗಳಿಗೆ ಮೂಲ ಚರ್ಮವನ್ನು ಬಳಸುವ ಬದಲು ಫೈಬರ್ ಪ್ಲೇಟ್‌ಗಳನ್ನು ಬಳಸುತ್ತಿರುವುದು ರೂಢಿಯಾಗಿದೆ. ಇದು ಮೂಲ ಚರ್ಮವಾದ್ಯದಂತೆ ನಾದ ಹೊಮ್ಮಿಸುವುದಿಲ್ಲ. ಇದಕ್ಕೆ ಚರ್ಮವಾದ್ಯವನ್ನೇ ಬಳಸಬೇಕು. ನಶಿಸಿ ಹೋಗುತ್ತಿರುವ ವೀರಗಾಸೆ ಕಲೆಯನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಗೆಳೆಯರ ಬಳಗ ರಂಗ ತಂಡದ ರೂವಾರಿ ಎ.ಸಿ.ಚಂದ್ರಪ್ಪ ಮಾತನಾಡಿ, ಇಂಥ ಶಿಬಿರಗಳಿಂದ ಜಾನಪದ ಕಲೆಗಳಾದ ವೀರಗಾಸೆ, ಡೊಳ್ಳು, ಚಿಟ್‌ಮೇಳ ಕಲಾ ಪ್ರಾಕಾರಗಳನ್ನು ಬೆಳೆಸಿದರೆ ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ ಎಂದರು.
ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಮ್ಮ, ಕಲಾಸೇವಾ ಸಂಘದ ಕಾರ್ಯದರ್ಶಿ ರವಿ, ಮಲ್ಲೇಶ್ ಸ್ವಾಮೀಜಿ, ಲಕ್ಷ್ಮೀದೇವಮ್ಮ, ರಂಗಕರ್ಮಿ ಎ.ಎಸ್.ಕೃಷ್ಣಮೂರ್ತಿ, ಎಚ್.ಆರ್.ಚಂದ್ರಪ್ಪ, ಕೆ.ಎಸ್.ಪಂಚಾಕ್ಷರಿ ಇತರರಿದ್ದರು.