

ಸಾಗರ: ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳು ಜಾನಪದ ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ದೊಡ್ಡದು. ಅವುಗಳನ್ನು ಸಂರಕ್ಷಿಸುವ ಕೆಲಸ ಗಂಭೀರವಾಗಿ ನಡೆಯಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ಸವಗಳನ್ನು ನಡೆಸುವ ಮೂಲಕ ಅವುಗಳ ಮಹತ್ವವನ್ನು ಪರಿಚಯಿಸುವ ಕೆಲಸ ಆಗಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಹಿರಿಯ ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಹೇಳಿದರು.
ಸಮೀಪದ ಹೊನಗೋಡು ಗ್ರಾಮದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಹೊನಗೋಡು ಸ್ವರ ಮೇಧಾ ಉತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ಕಲೆಗಳು ಶ್ರಮ ಜೀವನದ ಸಂಕೇತ. ಕಲೆ ಕೇವಲ ಮನೋರಂಜನೆಗಾಗಿ ಅಲ್ಲ, ಬದುಕಿಗೆ ಮಾರ್ಗದರ್ಶನವನ್ನು ನೀಡುತ್ತದೆ. ಜಾನಪದ ಕಲೆಯನ್ನು ಕಟ್ಟಿಕೊಟ್ಟವರೇ ಅನಕ್ಷರಸ್ಥರು. ಜಾನಪದ ಸಾಹಿತ್ಯವು ಸಂಸ್ಕೃತಿಯ ಬೆಳವಣಿಗೆಗೆ ಕಟ್ಟಿಬದ್ಧವಾಗಿ ನಿಂತಿದ್ದೆ. ಅದನ್ನು ವ್ಯವಸ್ಥಿತವಾಗಿ ದಾಖಲಿಸುವ ಕೆಲಸ ಇನ್ನಾದರೂ ನಡೆಯಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಉತ್ಸವಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಗ್ರಾಮೀಣ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ನಾಟ್ಯಾಚಾರ್ಯ ವಿದ್ವಾನ್ ಎಂ.ಗೋಪಾಲ್ ಮಾತನಾಡಿ, ಶ್ರುತಿ ಮತ್ತು ತಾಳವನ್ನು ಯಾವ ವಿಶ್ವವಿದ್ಯಾಲಯವು ಕಳಿಸುವುದಿಲ್ಲ. ಅದು ನಮ್ಮ ಮನೋಪ್ರವೃತ್ತಿಯಲ್ಲಿ ಮೂಡಿ ಬರಬೇಕು. ಕಲಾವಿದ ಗಟ್ಟಿಯಾಗುವುದು ಅಭ್ಯಾಸ ಹಾಗೂ ಅಧ್ಯಯನದಿಂದ. ಕಲೆಯ ಸಿದ್ಧಿ ಆಗಬೇಕು ಎಂದರೆ ನಿರಂತರತೆ ಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರಾಷ್ಟ್ರೀಯ ಉತ್ಸವಗಳನ್ನು ನಡೆಸುವುದರಿಂದ ಕಲಾ ವಿನಿಮಯವಾಗುತ್ತದೆ. ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ಡಾ. ಚಿನ್ಮಯ ಎಂ ರಾವ್ ಮಾತನಾಡಿ, ಸಂಗೀತ ಎಂಬುದು ಪ್ರಕೃತಿಯ ಮಡಿಲಿನಲ್ಲಿಯೇ ಹುಟ್ಟಿದೆ. ಪ್ರಕೃತಿ ಮತ್ತು ಸಂಗೀತವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಬಾಲ್ಯದಿಂದಲೇ ಮಕ್ಕಳಲ್ಲಿ ಸಂಗೀತದ ಆಸಕ್ತಿ ಮೂಡಿಸಬೇಕು. ಕೇವಲ ಪಠ್ಯದ ಶಿಕ್ಷಣದ ಮೂಲಕ ಜೀವನದ ಸಾಧನೆ ಸಾಧ್ಯವಿಲ್ಲ. ಸಂಗೀತ ಬದುಕನ್ನು ಮುನ್ನಡೆಸುತ್ತ,ೆ ಬದುಕನ್ನು ಕಟ್ಟಿಕೊಡುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಸಾಧನೆ ಮಾಡಲು ಸಂಗೀತ ಜ್ಞಾನಪೂರಕ ಎಂದರು.
ಎಸ್.ಮೃತ್ಯುಂಜಯ ರಾವ್, ಟಿ.ಎಸ್.ಕೃಪಾನಂದ, ಶೀಲಾ ರಾವ್, ಶಂಕರನಾರಾಯಣ ಹೆಗಡೆ ಇತರರಿದ್ದರು.
ಗೀಗಿ ಪದಗಳ ಗಾಯನ
ಗುಡ್ಡಪ್ಪ ಜೋಗಿ ಗೀಗಿ ಪದಗಳ ಗಾಯನ ನಡೆಸಿಕೊಟ್ಟರು. ವಿದ್ವಾನ್ ಗಣಪತಿ ಹೆಗಡೆ ಹಾಡಿನಬಾಳು ಅವರು ಶ್ರೀಧರ ಸ್ವಾಮಿಗಳ ಕುರಿತ ನೀಡಿದ ಹರಿಕಥೆ ಜನಮನ ಸೆಳೆಯಿತು. ಚಿನ್ಮಯಿ ಚಿನ್ನಗುಡಿ ದಾವಣಗೆರೆ, ವೃದ್ಧಿ ಜೋಶಿ, ವರ್ಷಾ ಹೊಸನಗರ, ಪಲ್ಲವಿ ಪೈ ಬೆಂಗಳೂರು, ಆದ್ಯಾ ಉಪಾಧ್ಯ ಉಡುಪಿ ಸಂಗೀತ ಸುಧೆ ಹಾರಿಸಿದರು. ಸುಮಾರು 4 ತಾಸುಗಳ ಕಾಲ ನಡೆದ ಕಾರ್ಯಕ್ರಮ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕರೆದುಕೊಂಡು ಹೋಗಿತ್ತು.