

ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯಲ್ಲಿ ಇರುವಷ್ಟು ಜಾನಪದ ಪ್ರದರ್ಶನ ಕಲೆಗಳು ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲ. ಆದರೆ ಅವುಗಳು ನಮ್ಮ ಅಸಡ್ಡೆಯಿಂದ ನಶಿಸುವ ಹಂತಕ್ಕೆ ಬಂದಿವೆ. ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಸಾಹಿತಿ ಜಯಪ್ರಕಾಶ್‌ಗೌಡ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ ಹಾಗೂ ಉದಯರವಿ ಟ್ರಸ್ಟ್ ಮತ್ತು ಕರ್ನಾಟಕ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಎರಡು ದಿನಗಳ ಸಂಕ್ರಾಂತಿ ಮಕ್ಕಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂಪನಿ ನಾಟಕಗಳು ಬಂದ ಮೇಲೆ ಯಕ್ಷಗಾನ ನೇಪಥ್ಯಕ್ಕೆ ಸರಿಯಲಾರಂಭಿಸಿತು. ಯಕ್ಷಗಾನ ವಿಭಿನ್ನ ವೇಷಭೂಷಣ, ಲಯಬದ್ಧ್ದವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾಗಿದ್ದು, ಅದನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಏನಾದರೂ ಮಾಡಿ ಈ ಕಲೆಯನ್ನು ನಮ್ಮ ಮುಂದಿನ ತಲೆಮಾರುಗಳಿಗೂ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಕಳೆದ 3-4 ವರ್ಷಗಳಿಂದ ಮೂಡಲಪಾಯ ಯಕ್ಷಗಾನ ಪರಿಷತ್ ಹೆಸರಿನ ಸಂಸ್ಥೆ ಆರಂಭಿಸಿ ಅನೇಕ ಸಂಸೋಧನೆಗಳನ್ನು ಮಾಡಿ ಯಕ್ಷಗಾನ ಕಲೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಯಕ್ಷಗಾನದಲ್ಲಿ ಸಂಭಾಷಣೆ, ಕುಣಿತ, ಬಗೆಬಗೆಯ ಹೆಜ್ಜೆಗಳು, ಹಾಡುಗಾರಿಕೆ, ವಾದ್ಯಗಳ ಸಮೂಹವಿದೆ. ಇವುಗಳನ್ನು ನೋಡಿದರೆ ಯಕ್ಷಗಾನ ಮುಂದಿನ ದಿನಗಳಲ್ಲಿ ಜನರ ಆಕರ್ಷಣೆಯಾಗಲಿದೆ. ಮೊದಲಿಗೆ ಬೇಸರ ಎನಿಸಿದರೂ ತಾಳ್ಮೆಯಿಂದ ಕುಳಿತು ನೋಡಿದರೆ ಅಲ್ಪಸ್ವಲ್ಪ ಅರ್ಥವಾಗಿ ನಂತರ ಮುಂದಿನ ದಿನಗಳಲ್ಲಿ ಅರ್ಥವಾಗಲಿದೆ. ಯಕ್ಷಗಾನವನ್ನು ಯಾರು ಕೇಳಲಿ, ಬಿಡಲಿ ಈ ಕಲೆಯನ್ನು ಮುಂದಿನ ಪರಂಪರೆಗೆ ಕಳುಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈಗಲಾದರೂ ನಾವು ನೀವೆಲ್ಲರೂ ನಮ್ಮ ಜಾನಪದ ಕಲೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಪ್ರಯತ್ನ ಮಾಡಬೇಕಿದೆ ಎಂದು ಮನವಿ ಮಾಡಿದರು.
ಗ್ರಾೃಜುಯೇಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಂ.ಚಿ.ಸಣ್ಣಸ್ವಾಮಿಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ತಾಲೂಕು ಜಾನಪದ ಪರಿಷತ್‌ನ ಅಧ್ಯಕ್ಷ ಕತ್ತರಘಟ್ಟ ವಾಸು, ಶಶಿಧರ್ ಭಾರಿಘಾಟ್, ರೈತ ಮುಖಂಡರಾದ ನಂದಿನಿ ಜಯರಾಮು, ಉದಯರವಿ ಟ್ರಸ್ಟ್ ಅಧ್ಯಕ್ಷ ಸೋಮಶೇಖರ್, ಆರ್‌ಟಿಒ ಮಲ್ಲಿಕಾರ್ಜುನ ಮತ್ತಿತರರಿದ್ದರು.