

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಜಾನಪದ ಅಕಾಡೆಮಿ 2024ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ತಜ್ಞ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಜಿಲ್ಲೆಯ ಇಟಿಗಟ್ಟಿ ಗ್ರಾಮದ ಜಾನಪದ ಕಲಾವಿದ ಪ್ರಭು ಬಸಪ್ಪ ಕುಂದರಗಿ ಅವರು ಜಾನಪದ ಸಂಗೀತ ವಿಭಾಗದಲ್ಲಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಭು ಕುಂದರಗಿ ವಿದ್ಯಾರ್ಥಿ ದೆಸೆಯಲ್ಲೇ ಜಾನಪದ ಹಾಡುಗಳನ್ನು ರಚಿಸುತ್ತ, ಹಾಡುಗಾರಿಕೆಯ ಮೂಲಕ ಜನಮನ ಸೆಳೆದವರು. 1985ರಲ್ಲಿ ಪಿಯುಸಿ ಓದುತ್ತಿದ್ದಾಗ ಎನ್‌ಎಸ್‌ಎಸ್ ಶಿಬಿರದಲ್ಲಿ ಪಾಲ್ಗೊಂಡು ತತ್ವಪದ ಗಾಯನದಲ್ಲಿ ತೃತೀಯ ಸ್ಥಾನ ಪಡೆದಿದ್ದರು. ನಂತರ ದೇಶಭಕ್ತಿ ಗೀತೆ, ಜಾನಪದ ಗಾಯನ, ತತ್ವಪದ, ಹಬ್ಬ- ಹರಿದಿನ ಪದಗಳು, ಭಕ್ತಿಗೀತೆ, ಲಾವಣಿ ಗೀತೆ, ರಂಗಗೀತೆ, ಭಾವಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಧಾರವಾಡ ಉತ್ಸವ, ಧಾರವಾಡ ಜಂಬೂಸವಾರಿ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನಗಳು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ವಿವಿಧ ಜಯಂತಿಗಳು, ಶಿವರಾತ್ರಿ ಉತ್ಸವಗಳಲ್ಲಿ ದೇಸಿ ಸೊಗಡಿನ ಗೀತಗಾಯನಕ್ಕೆ ಮನಸೋಲದವರಿಲ್ಲ.
ಪ್ರಭು ಕುಂದರಗಿ ಅವರ ಸಾಹಿತ್ಯ, ಸಂಗೀತ, ಧ್ವನಿ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಅನೇಕ ಆಡಿಯೋ, ವಿಡಿಯೋ ಧ್ವನಿಸುರುಳಿಗಳು ಹೊರಬಂದಿವೆ. ಪ್ರಖ್ಯಾತ ಮುಳಮುತ್ತಲ ಕಾಮಣ್ಣನ ಕುರಿತ ಆಡಿಯೋ, ವಿಡಿಯೋ ತ್ರಿಪದಿ ಹೋಳಿ ಹಾಡುಗಳು, ಸಿದ್ಧಾರೂಢರ ಭಕ್ತಿಗೀತೆಗಳು, ನಾಡೋಜ ಪಾಟೀಲ ಪುಟ್ಟಪ್ಪ ಕುರಿತು ಧ್ವನಿಸುರುಳಿ ಪ್ರಮುಖವಾದವು.
ಸ್ವ ಸಾಹಿತ್ಯದ ಮುಖಾಂತರ ಜಾನಪದ ಸೊಗಡನ್ನೊಳಗೊಂಡ `ಮೂಲ ರಿವಾಯತ್' ಪದಗಳ ಸಂಗ್ರಹಣೆ, ನಾಟಕಗಳನ್ನೊಳಗೊಂಡ ಅನೇಕ ಕೃತಿಗಳನ್ನು ಹೊರತಂದಿದ್ದಾರೆ. ಮೂಲ ಗ್ರಾಮೀಣ ಜಾನಪದ ಕಲಾ ಪ್ರಕಾರಗಳಾದ ಸೋಬಾನ, ಬೀಸುವ ಕಲ್ಲಿನ ಪದ, ಹಂತಿ, ಲಾವಣಿ, ಗೀಗೀ, ಕೋಲಾಟದ ಪದಗಳು, ಒಡಪುಗಳ ಕುರಿತು ಎನ್‌ಎಸ್‌ಎಸ್ ಶಿಬಿರಾರ್ಥಿಗಳು, ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗದ ವಿದ್ಯಾರ್ಥಿಗಳಿಗೆ ಅನೇಕ ಉಪನ್ಯಾಸ ನೀಡಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಜಾನಪದ ಗೀತೆ, ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಅಂತರ ವಲಯ ಯುವ ಜನೋತ್ಸವ, ಜಿಲ್ಲಾ ಯುವ ಜನೋತ್ಸವಗಳಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದಾರೆ.
ಇವರ ಜಾನಪದ ಕಲಾ ಶ್ರೀಮಂತಿಕೆಯನ್ನು ಪರಿಗಣಿಸಿ ಜಾನಪದ ರತ್ನ, ಜಾನಪದ ಸೇವಾ ಪುರಸ್ಕಾರ, ಮನಸೂರು ರಾಷ್ಟಿçÃಯ ಪುರಸ್ಕಾರ, ಜಾನಪದ ಜಾಣ, ರಂಗನಕ್ಷತ್ರ ಪುರಸ್ಕಾರ, ಜಾನಪದ ಜನನಿತ ಪ್ರಶಸ್ತಿ, ಽÃಮಂತ ಸನ್ಮಾನ, ಗ್ರಾಮ ಚಿಂತಕ, ಸೇವಾರತ್ನ, ಜಾನಪದ ಸಿರಿ ಗೌರವ ಸನ್ಮಾನ, ಸಂಗೊಳ್ಳಿ ರಾಯಣ್ಣ ಗೌರವ, ಸದ್ಭಾವನ ಹಾಗೂ ಜಿಲ್ಲಾ, ರಾಜ್ಯ, ರಾಷ್ಟç ಯುವ ಪ್ರಶಸ್ತಿಗಳು ಸಂದಿವೆ.