ರಾಮು ಮೂಲಗಿಗೆ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ

4 Dwd 4 Dr. Ramu Mulagi
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ಜಾನಪದ ಅಕಾಡೆಮಿಯು 2023ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ತಜ್ಞ ಪ್ರಶಸ್ತಿ ಪ್ರಕಟಿಸಿದೆ. ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಡಾ. ರಾಮು ಮೂಲಗಿ ಅವರು ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಡಾ. ಮೂಲಗಿ ಅವರು ಹಂತಿಪದ ವಿಭಾಗದಲ್ಲಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದು, 25,000 ರೂಪಾಯಿ ನಗದು ಒಳಗೊಂಡಿದೆ.

`ರಾಮೂ' ಎಂದೇ ಪರಿಚಿತರಾಗಿರುವ ಡಾ. ಮೂಲಗಿ ಬಿಎ, ಬಿ.ಎಡ್ ಪದವೀಧರರು. ಆಕಾಶವಾಣಿ ಬಿ ಹೈ ಗ್ರೇಡ್ ಕಲಾವಿದರಾಗಿರುವ ಚಂದನ ಟಿವಿ ಹಾಗೂ ಖಾಸಗಿ ವಾಹಿನಿಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು, ಇಂದಿಗೂ ಪ್ರಸಾರವಾಗುತ್ತಿವೆ. ಮೈಸೂರು ದಸರಾ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ಜಾನಪದ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿ ಜಾನಪದ ಸಾಹಿತ್ಯ, ಸಂಗೀತ ಸಂಸ್ಕೃತಿಯನ್ನು ಪ್ರಸಾರ ಮಾಡಿದ್ದಾರೆ. ಜಾನಪದ ವಿಶ್ವವಿದ್ಯಾಲಯ ಮತ್ತು ಹುಬ್ಬಳ್ಳಿಯಲ್ಲಿ ಜಾನಪದ ಜಗತ್ತು ನಿರ್ಮಾಣಕ್ಕೆ ಇವರ ಕೊಡುಗೆ ಅಪಾರ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಏರ್ಪಡಿಸುವ ಸಾಕ್ಷರತಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ತರಬೇತಿ ನೀಡುತ್ತಿದ್ದಾರೆ.

ಜಾನಪದ ಹಾಡು, ಭಕ್ತಿ ಗೀತೆ, ಕಥೆ, ಲೇಖನಗಳ 10 ಕೃತಿಗಳನ್ನು ರಚಿಸಿದ್ದಾರೆ. ಇವರ ಜಾನಪದ ಪಾಂಡಿತ್ಯವನ್ನು ಗುರುತಿಸಿ ಮಠಗಳು, ಸಂಘ- ಸಂಸ್ಥೆಗಳು, ಹು-ಧಾ ಮಹಾನಗರ ಪಾಲಿಕೆಯ ಪ್ರಶಸ್ತಿ, ಬಿರುದುಗಳಿಗೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net