

ವಿಜಯಪುರ: ಪಟ್ಟಣದ ಬಹುತೇಕ ಭಾಗಗಳಲ್ಲಿ 20 ದಿನಗಳಾದರೂ ಕುಡಿಯುವ ನೀರು ಪೂರೈಸಿಲ್ಲ. ಚರಂಡಿಗಳು ಕೊಳಚೆಯಿಂದ ಕೂಡಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು, ಜನರು ಸಾಂಕ್ರಾಮಿಕ ರೋಗ ಭೀತಿ ಎದುರಿಸುವಂತಾಗಿದೆ ಎಂದು ಪಟ್ಟಣದ 9ನೇ ವಾರ್ಡ್‌ನ ಮಹಿಳೆಯರು ಅಲವತ್ತುಕೊಂಡರು.
ಪುರಸಭೆ ಕಚೇರಿಗೆ ಬುಧವಾರ ಆಗಮಿಸಿದ್ದ ವಾರ್ಡ್ ಮಹಿಳೆಯರು ಅಧಿಕಾರಿಗಳ ಬಳಿ ಸಮಸ್ಯೆ ಬಗ್ಗೆ ಅಲವತ್ತುಕೊಂಡರು.
ಕುಡಿಯಲು ಸಮರ್ಪಕವಾಗಿ ನೀರು ಸರಬರಾಜು ಮಾಡದೇ ತಾರತಮ್ಯ ಮಾಡಲಾಗುತ್ತಿದೆ. ಚರಂಡಿಗಳಲ್ಲಿ ಸಂಗ್ರಹಗೊಂಡ ಕೊಳಚೆ ಸ್ವಚ್ಛಗೊಳಿಸಿಲ್ಲ. ಇದರಿಂದ ಸ್ಥಳೀಯರು ರೋಗ ಭೀತಿಯಲ್ಲಿ ಬದುಕುವಂತಾಗಿದೆ ಎಂದು ಅಳಲು ತೋಡಿಕೊಂಡರು.
ವಾರ್ಡ್‌ನಲ್ಲಿ ಸಮರ್ಪಕವಾಗಿ ಕೊಳಾಯಿ ಸಂಪರ್ಕ ನೀಡಿಲ್ಲ. 20 ದಿನಗಳಾದರೂ ನೀರು ಪೂರೈಸುವುದಿಲ್ಲ. ಟ್ಯಾಂಕರ್ ಮೂಲಕವೂ ಅಗತ್ಯವಿರುವಷ್ಟು ನೀರು ಸರಬರಾಜು ಮಾಡುವುದಿಲ್ಲ. ಲಾಕ್‌ಡೌನ್‌ನಿಂದಾಗಿ ಕೂಲಿ ಕೆಲಸವೂ ಇಲ್ಲವಾಗಿದ್ದು, ಆಹಾರ ಸಾಮಗ್ರಿಗೇ ಹಣವಿಲ್ಲದಿರುವಾಗ ನೀರನ್ನು ಖರೀದಿಸುವುದಾದರೂ ಹೇಗೆ ಎಂದು ವಾರ್ಡ್ ನಿವಾಸಿ ಮಂಜುಳಾ ಪ್ರಶ್ನಿಸಿದರು.
ಮನೆಗಳಿದ್ದರೂ ಏಳೆಂಟು ವರ್ಷಗಳಿಂದಲೂ ಪುರಸಭೆ ಪೈಪ್‌ಲೈನ್ ಮಾಡಿಲ್ಲ. ಸಮಸ್ಯೆ ಬಗ್ಗೆ ತಿಳಿದಿದ್ದರೂ ಪುರಸಭೆಯಿಂದ ಪರಿಹಾರ ದೊರಕಿಲ್ಲ ಎಂದು ವಾರ್ಡ್ ನಿವಾಸಿ ಮಾದವಿ ಹೂಗಾರ್ ಮನವಿ ಮಾಡಿದರು.
3ನೇ ವಾರ್ಡ್ ನಿವಾಸಿ ರವೀಂದ್ರ ಮಾತನಾಡಿ, ಪುರಸಭೆಯಿಂದ ಕೆಲವೆಡೆ 2-3 ದಿನಗಳಿಗೊಮ್ಮೆ, ಮತ್ತೆ ಕೆಲವೆಡೆ 7-8 ದಿನಗಳಿಗೊಮ್ಮೆ ಮತ್ತೆ ಕೆಲವೆಡೆ ಟ್ಯಾಂಕರ್ ಮೂಲಕ 20-25 ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ. ಈ ವ್ಯವಸ್ಥೆ ಸರಿಯಾಗಬೇಕು. ಪ್ರತಿ ನೀರಿನ ನಲ್ಲಿಗೂ ವಾಟರ್ ಮೀಟರ್ ಅಳವಡಿಸಿ, ಹಣ ಪಡೆಯಬೇಕು ಎಂದರು.
ಬೇಸಿಗೆಯಾದ ಕಾರಣ ಬಹಳಷ್ಟು ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ಈಗ 4 ಕೊಳವೆ ಬಾವಿ ಕೊರೆಸಲು ಮಂಜೂರಾಗಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಕಂದಾಯಾಧಿಕಾರಿ ಜಯಕಿರಣ್ ತಿಳಿಸಿದರು.
ಆರೋಗ್ಯಾಧಿಕಾರಿ ಪ್ರಭಾವತಿ ಮಾತನಾಡಿ, 9ನೇ ವಾರ್ಡ್‌ನ ಹೊರಚರಂಡಿಗಳ ಕಾಮಗಾರಿ ಅವೈಜ್ಞಾನಿಕವಾಗಿದ್ದು, ನೀರು ಹರಿವಿಗೆ ಸಮಸ್ಯೆಯಾಗಿದೆ. ಶೀಘ್ರವೇ ಚರಂಡಿ ಸ್ವಚ್ಛ ಮಾಡಲಾಗುವುದು ಎಂದು ತಿಳಿಸಿದರು.